ಹಣದ ಹೊಳೆ ಗ್ಯಾರಂಟಿಗೆ; ಗ್ರಾಮೀಣ ಜನಜೀವನ ಇಕ್ಕಟ್ಟಿಗೆ: ಬಿಜೆಪಿ ಆರೋಪ
ಕಾರ್ಕಳ ಕ್ಷೇತ್ರಕ್ಕೆ ಬೃಹತ್ ನೀರಾವರಿ ಇಲಾಖೆಯಿಂದ ಮಂಜೂರಾಗಿರುವ ಹಣ ಬಿಡುಗಡೆಗೆ ಬಿಜೆಪಿ ಆಗ್ರಹ

ಕಾರ್ಕಳ: ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಘೋಷಿಸಿದ ಗ್ಯಾರಂಟಿ ಯೋಜನೆಗಳಿಗೆ ಹಣದ ಹೊಳೆ ಹರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರವು ಅಭಿವೃದ್ದಿ ಕಾರ್ಯಗಳಿಗೆ ಹಣ ನೀಡದೆ ವಂಚಿಸುತ್ತಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರಕಾರ ಕ್ಷೇತ್ರದ ಅಭಿವೃದ್ದಿಯಲ್ಲಿ ತಾರತಮ್ಯ ಮಾಡುತ್ತಿದೆ. ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರು ಸಚಿವರಾಗಿದ್ದ ವೇಳೆ ಅವರ ನಿರಂತರ ಪ್ರಯತ್ನದಿಂದ ಕ್ಷೇತ್ರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅನುದಾನಗಳು ಲಭ್ಯವಾಗಿ ಅಭಿವೃದ್ದಿ ಕೆಲಸಗಳಾಗಿವೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಕ್ಷೇತ್ರದ ಅಭಿವೃದ್ದಿಗೆ ಕಿಂಚಿತ್ತು ಹಣ ಬಿಡುಗಡೆಯಾಗಿಲ್ಲ ಎಂದರು.
ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರದ ಅವಧಿಯ 2022-23ನೇ ಸಾಲಿನಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಬೃಹತ್ ನೀರಾವರಿ ಇಲಾಖೆಯಿಂದ ( ವಾರಾಹಿ) 16 ಕೋ.ರೂ ಮಂಜೂರಾತಿ ನೀಡಿತ್ತು. ಟೆಂಡರ್ ಪ್ರಕ್ರಿಯೆಯೂ ನಡೆದಿದೆ. ಕಾಮಗಾರಿ ಕೈಗೆತ್ತಿಕೊಳ್ಳಲು ಹಣ ಬಿಡುಗಡೆಯಾಗಬೇಕಿದ್ದು, ಕಾಂಗ್ರೆಸ್ ಸರಕಾರ ಹಣ ಬಿಡುಗಡೆಗೊಳಿಸದೆ ತಡೆ ಹಿಡಿದಿದೆ. ಕಾಮಗಾರಿಗಳು ನಡೆಯದೆ ಗ್ರಾಮೀಣ ಭಾಗದ ಜನ ಇಕ್ಕಟ್ಟಿಗೆ ಸಿಲುಕಿದ್ದಾರೆ. ಬೃಹತ್ ನೀರಾವರಿ ಸೇರಿ ಕ್ಷೇತ್ರಕ್ಕೆ ಸುಮಾರು 75 ಕೋ. ರೂ. ಅಧಿಕ ಮೊತ್ತದ ಅನುದಾನ ಸರಕಾರದಿಂದ ಬಿಡುಗಡೆಯಾಗಬೇಕಿದೆ. ಆದ್ದರಿಂದ ತಡೆ ನೀಡಿರುವ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ
ನಮ್ಮ ಶಾಸಕ ವಿ. ಸುನಿಲ್ ಕುಮಾರ್ ಅವರು ಕ್ಷೇತ್ರಕ್ಕೆ ಮಂಜೂರಾತಿಗೊಂಡ ಹಣ ಬಿಡುಗಡೆಗೊಳಿಸುವಂತೆ ಮತ್ತು ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೆ ರಾಜ್ಯದ ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹೇರಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿ ಟೆಂಡರ್ ನಡೆದು ತಡೆಹಿಡಿದ ಬಾಕಿ ಹಣದ ಬಿಡುಗಡೆಯ ನಿರೀಕ್ಷೆಯಲ್ಲಿ ಕ್ಷೇತ್ರದ ಜನರಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.