ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಆರೋಪಿ ಪ್ರವೀಣ್ ಚೌಗುಲೆಯಿಂದ ಹೊಸ ವಕೀಲರ ನೇಮಕ
ಪ್ರವೀಣ್ ಚೌಗುಲೆ
ಉಡುಪಿ, ನ.21: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ತನ್ನ ಪರ ವಕಾಲತ್ತು ನಡೆಸಲು ಹೊಸ ವಕೀಲನನ್ನು ನೇಮಕ ಮಾಡಿದ್ದು, ಮುಂದಿನ ವಿಚಾರಣೆ ಸಂದರ್ಭ ಆರೋಪಿ ಪರ ವಕೀಲರು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಹಿರಿಯಡ್ಕ ಜೈಲಿನಲ್ಲಿದ್ದ ಪ್ರವೀಣ್ ಚೌಗುಲೆಯನ್ನು ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಸಂದರ್ಭ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಹಾಜರಿದ್ದರು.
ಈ ವೇಳೆ ಆರೋಪಿಯು ತಾನು ತನ್ನ ಪರ ವಕಾಲತ್ತು ನಡೆಸಲು ಹೊಸ ವಕೀಲರಾದ ಬೆಂಗಳೂರಿನ ಶ್ರೀಧರ್ ಅವರನ್ನು ನೇಮಕ ಮಾಡಿದ್ದು, ಮುಂದಿನ ದಿನಾಂಕದಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದನು. ಅದರಂತೆ ನ್ಯಾಯಾಧೀಶ ಸಮಿವುಲ್ಲಾ ಮುಂದಿನ ವಿಚಾರಣೆಯನ್ನು ಡಿ.11ಕ್ಕೆ ಮುಂದೂಡಿ ಆದೇಶ ನೀಡಿ ದರು. ಅದೇ ದಿನ ಚೌಗುಲೆ ವಕೀಲರು ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಆ ದಿನ ಮುಂದಿನ ಸಾಕ್ಷಿ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದುದರಿಂದ ಸಾಕ್ಷಿಗಳು ಸಮನ್ಸ್ ಸ್ವೀಕರಿಸಿದ ಬಳಿಕವಷ್ಟೇ ನ್ಯಾಯಾಲಯ ಮುಂದೆ ಹಾಜರಾಗುವಂತೆ ನ್ಯಾಯಾಧೀಶರು ಸಾಕ್ಷಿಗಳಿಗೆ ಸೂಚಿಸಿದರು. ಹೀಗಾಗಿ ಈಗಾಗಲೇ ದಿನಾಂಕ ನಿಗದಿ ಪಡಿಸಿದ ಎರಡು ದಿನ ಕೂಡ ಸಾಕ್ಷಿಗಳ ವಿಚಾರಣೆ ನಡೆಯಲಿಲ್ಲ.
ಮುಂದಿನ ವಿಚಾರಣೆಗೆ ಆರೋಪಿ ಯನ್ನು ಮತ್ತೆ ಬೆಂಗಳೂರಿನಿಂದ ಕರೆ ತರುವ ಬದಲು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವಂತೆ ನ್ಯಾಯಾಧೀಶರು ತಿಳಿಸಿದರು. ಅದರಂತೆ ಆರೋಪಿಯನ್ನು ಇಂದು ಮತ್ತೆ ವಾಪಾಸ್ಸು ಬೆಂಗಳೂರು ಪರಪ್ಪರನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಲಾಯಿತು.