ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಗಾಯಾಳು ಹಾಜಿರಾ ಆಸ್ಪತ್ರೆಯಿಂದ ಬಿಡುಗಡೆ
ಉಡುಪಿ: ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಸಂದರ್ಭದಲ್ಲಿ ದುಷ್ಕರ್ಮಿಯಿಂದ ಇರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮೃತ ಹಸೀನಾ ಅವರ ಅತ್ತೆ ಹಾಜಿರಾ (70) ಇಂದು ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಾಲ್ವರನ್ನು ಹತ್ಯೆಗೈದ ಹಂತಕನಿಂದ ಚೂರಿ ಇರಿತಕ್ಕೆ ಒಳಗಾಗಿದ್ದ ಹಾಜಿರಾ ಬಳಿಕ ತಪ್ಪಿಸಿಕೊಂಡು ಶೌಚಾಲಯದೊಳಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯೊಳಗೆ ತನಿಖೆ ನಡೆಸುತ್ತಿದ್ದ ವೇಳೆ ಒಳಗಡೆಯಿಂದ ಬಾಗಿಲು ಮುಚ್ಚಿರುವ ಶೌಚಾಲಯವನ್ನು ಗಮನಿಸಿದರು. ಈ ವೇಳೆ ಬಾಗಿಲು ತೆರೆಯು ವಂತೆ ಪೊಲೀಸರು ಮನವಿ ಮಾಡಿದಾಗ ಹೆದರಿದ್ದ ಹಾಜಿರಾ ಬಾಗಿಲು ತೆರೆಯಲು ಧೈರ್ಯ ತೋರಲಿಲ್ಲ. ಕೊನೆಗೆ ಬಾಗಿಲು ಮುರಿದು ಹಾಜಿರಾರನ್ನು ರಕ್ಷಿಸಿದ ಪೊಲೀಸರು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೊಟ್ಟೆಯ ಎಡಭಾಗಕ್ಕೆ ಇರಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಹಾಜಿರಾ ಮಣಿಪಾಲ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚೇತರಿಸಿಕೊಂಡಿರುವ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದಾ ರೆಂದು ಆಸ್ಪತ್ರೆ ಮೂಲಗಳು ದೃಢಪಡಿಸಿವೆ.