ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ ಕುಟುಂಬ
ಕುರ್‌ಆನ್ ಪ್ರತಿ, ಮಲಾಲ ಕುರಿತ ಪುಸ್ತಕ ನೀಡಿ ಎಸ್ಪಿಗೆ ಅಭಿನಂದನೆ
ಉಡುಪಿ : ನೇಜಾರು ತಾಯಿ ಮತ್ತು ಮಕ್ಕಳ ಕೊಲೆ ಪ್ರಕರಣವನ್ನು ಕ್ಷಿಪ್ರವಾಗಿ ಪತ್ತೆ ಮಾಡಿದ ಉಡುಪಿ ಪೊಲೀಸ್ ಇಲಾಖೆಯನ್ನು ಮೃತರ ಕುಟುಂಬ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಅವರನ್ನು ಭೇಟಿಯಾಗಿ ಅಭಿನಂದಿಸಿತು.
ನೇಜಾರಿನ ನೂರ್ ಮುಹಮ್ಮದ್, ಅವರ ಮಗ ಅಸಾದ್, ಮೃತ ಹಸೀನಾರ ಸಹೋದರ ಅಶ್ರಫ್, ಇವರ ಮಗಳು ಫಾತಿಮಾ ಅಸ್ಬಾ, ಸಂಬಂಧಿಕ ಯಾಸೀನ್, ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್ ಅವರು ಎಸ್ಪಿಯವರನ್ನು ಭೇಟಿಯಾಗಿ ಅಭಿನಂದಿಸಿದರು. ನೂರ್ ಮುಹಮ್ಮದ್ ಎಸ್ಪಿಯವರಿಗೆ ಕುರ್‌ಆನ್ ಪ್ರತಿ ನೀಡಿದರೆ, ಫಾತಿಮಾ ಅಸ್ಬಾ ಮಲಾಲ ಕುರಿತ ಪುಸ್ತಕವನ್ನು ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಎ.ಗಫೂರ್, ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ನೂರ್ ಮುಹಮ್ಮದ್ ತಮ್ಮ ಕುಟುಂಬದ ಜೊತೆ ಬೆರೆತು ಸಮಯ ಕಳೆಯುವಂತೆ ಮತ್ತು ಮಗನಿಗೆ ಭವಿಷ್ಯದ ಕುರಿತು ಕೆಲವು ಮಾರ್ಗದರ್ಶನ ನೀಡಿದರು ಎಂದು ತಿಳಿಸಿದರು.
ಅದೇ ರೀತಿ ಸಮಾಜದ ಸುರಕ್ಷತೆ, ಸೌಹಾರ್ದತೆ ಬಗ್ಗೆಯೂ ಎಸ್ಪಿಯವರ ಜೊತೆ ಚರ್ಚೆ ಮಾಡಿದ್ದೇವೆ. ಸಮಾಜದಲ್ಲಿ ಶಾಂತಿ ಸಾಮರಸ್ಯ ನಿರ್ಮಾಣವಾಗಿ, ಜನ ಭಯಭೀತಿಯಿಂದ ಹೊರಬರಬೇಕು. ಮಹಿಳೆಯರು ಸುರಕ್ಷಿತವಾಗಿ ಕೆಲಸಕ್ಕೆ ಹೋಗುವಂತೆ ಮಾಡಬೇಕು ಎಂಬುದರ ಕುರಿತು ಎಸ್ಪಿ ಜೊತೆ ಮಾತು ಕತೆ ನಡೆಸಿದ್ದೇವೆ ಎಂದು ಅವರು ಹೇಳಿದರು.