ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ| ಆರೋಪಿ ಪ್ರವೀಣ್ ಚೌಗುಲೆಯಿಂದ ವಿಚಾರಣೆ ವಿಳಂಬ
ವಿಶೇಷ ಪಿಪಿ ಆಕ್ಷೇಪ ಸಲ್ಲಿಕೆ
ಪ್ರವೀಣ್ ಚೌಗುಲೆ
ಉಡುಪಿ, ಜ.4: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಕೆಲವೊಂದು ಕಾರಣ ನೀಡಿ ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡುತ್ತಿರುವ ಬಗ್ಗೆ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ.
2023ರ ನ.12ರಂದು ನಡೆದ ಈ ಕೊಲೆ ಪ್ರಕರಣದ ಚಾರ್ಜ್ಶೀಟ್ನ್ನು ಪೊಲೀಸರು 2024ರ ಫೆ.2ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಬಳಿಕ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಅಭಿಯೋಜಕರಿಗೆ ಮತ್ತು ಆರೋಪಿ ವಕೀಲರಿಗೆ ಈ ಪ್ರಕರಣದಲ್ಲಿ ತ್ವರಿತ ವಿಚಾರಣೆಗೆ ಸಹಕರಿಸುವಂತೆ ನ್ಯಾಯಾಲಯವು ಪ್ರಕರಣವನ್ನು ಎ.10ಕ್ಕೆ ನಿಗದಿ ಪಡಿಸಿತ್ತು.
ಈ ಮಧ್ಯೆ ಆರೋಪಿ ಈ ಪ್ರಕರಣವನ್ನು ಉಡುಪಿಯಿಂದ ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದು, ಇದರಿಂದ ಜೂ.13ರಿಂದ 15ರವರೆಗೆ ನಿಗದಿ ಪಡಿಸಲಾಗಿದ್ದ ಸಾಕ್ಷ್ಯ ವಿಚಾರಣೆಗೆ ನಡೆಯಲಿಲ್ಲ. ಮುಂದೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ ತೆರವುಗೊಳಿಸಿ, ನ.20 ಮತ್ತು 21ಕ್ಕೆ ಸಾಕ್ಷಿ ವಿಚಾರಣೆ ದಿನಾಂಕ ನಿಗದಿ ಪಡಿಸಲಾಗಿತ್ತು. ಅಂದು ಆರೋಪಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ತನ್ನ ವಕೀಲರನ್ನು ಪ್ರಕರಣದಿಂದ ಹಿಂಪಡೆಯುವುದಾಗಿ ಬೇರೆ ವಕೀಲರನ್ನು ನೇಮಿಸಲು ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದನು. ಆ ಕಾರಣದಿಂದ ಆ ದಿನ ಕೂಡ ಸಾಕ್ಷಿ ವಿಚಾರಣೆ ನಡೆದಿಲ್ಲ.
ಡಿ.12ಕ್ಕೆ ಹಾಜರಾದ ಆರೋಪಿ ಪರ ವಕೀಲರು ಹೊಸ ಕಾನೂನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 254ರಡಿ ತಿಳಿಸಿರುವಂತೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂದು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿ ನ್ಯಾಯಾಲಯ ಜ.4ಕ್ಕೆ ವಿಚಾರಣೆಯನ್ನು ಮುಂದೂಡಿತ್ತು.
ಅರ್ಜಿ ವಜಾಕ್ಕೆ ಮನವಿ: ಅದರಂತೆ ಇಂದು ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ಆರೋಪಿಯ ಅರ್ಜಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿದರು.
ಈ ಪ್ರಕರಣದ ತನಿಖೆ, ದೋಷ ರೋಪಣಾ ಪಟ್ಟಿ ಸಲ್ಲಿಕೆ, ಆಪಾದನೆ ರಚನೆ ಹಾಗೂ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾನೂನು ಜಾರಿ ಬರುವ ಪೂರ್ವದಲ್ಲಿಯೇ ಆಗಿದ್ದು, ಇಂತಹ ಪ್ರಕರಣಗಳಲ್ಲಿ ಹೊಸ ಕಾನೂನು ಅಳವಡಿಸಲು ಅವಕಾಶ ಇಲ್ಲ. ಬದಲಾಗಿ ದಂಡ ಪ್ರಕ್ರಿಯೆ ಸಂಹಿತೆ ಕಾನೂನು ಮಾತ್ರ ಪಾಲಿಸಲು ಮಾತ್ರ ಅವಕಾಶ ಇದೆ. ಆದುದರಿಂದ ಈ ಅರ್ಜಿಯನ್ನು ಪ್ರಾಥಮಿಕ ಹಂತದಲ್ಲಿಯೇ ವಜಾ ಗೊಳ್ಳುವಂತಾಗಿದೆ ಎಂದು ಆಕ್ಷೇಪದಲ್ಲಿ ತಿಳಿಸಲಾಗಿದೆ.
ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ಆರೋಪಿಗೆ ಈ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸಲು ಇಚ್ಛೆ ಇಲ್ಲದಂತಾಗಿದೆ. ಹೀಗೆ ಕೆಲವೊಂದು ಕಾರಣ ನೀಡಿ ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡುವ ಉದ್ದೇಶವನ್ನು ಆರೋಪಿ ಹೊಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದೀಗ ಸಲ್ಲಿಸಿರುವ ಅರ್ಜಿ ಕೂಡ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲು ಆರೋಪಿಯ ಉದ್ದೇಶದ ಭಾಗವೆಂಬಂತೆ ಕಂಡುಬರುತ್ತದೆ ಎಂದು ವಿಶೇಷ ಅಭಿಯೋಜಕರು ತನ್ನ ಆಕ್ಷೇಪದಲ್ಲಿ ತಿಳಿಸಿದ್ದಾರೆ.
ಅರ್ಜಿ ಸಂಬಂಧ ವಿಶೇಷ ಅಭಿಯೋಜಕರು ತಮ್ಮ ವಾದ ಮಂಡಿಸಲು ಜ.25ಕ್ಕೆ ದಿನಾಂಕ ನಿಗದಿಪಡಿಸಿ ನ್ಯಾಯಾಧೀಶ ಸಮಿವುಲ್ಲಾ ಆದೇಶ ನೀಡಿದರು. ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿ ಪರ ವಕೀಲ ದಿಲ್ರಾಜ್ ರೋಹಿತ್ ಸಿಕ್ವೇರಾ ಹಾಜರಿದ್ದರು.