‘ಎಂ.ಟಿ.ಸಾಯಂ- ಸಾಹಿತ್ಯಿಕ ಸಂಜೆ’ ಕಾರ್ಯಕ್ರಮ
ಮಣಿಪಾಲ, ಜು.30: ಮಾಹೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ ಆಶ್ರಯದಲ್ಲಿ ಉಡುಪಿಯ ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ಹಾಗೂ ಸಹೃದಯ ಸಂಗಮಂ ಸಹಯೋಗದೊಂದಿಗೆ ಮಲಯಾಳಂ ಲೇಖಕ ಎಂ.ಟಿ.ವಾಸುದೇವನ್ ನಾಯರ್ ಅವರ ಸಾಹಿತ್ಯ ಮತ್ತು ಸಿನಿಮಾ ಸುತ್ತಮುತ್ತ ‘ಎಂ.ಟಿ.ಸಾಯಂ- ಸಾಹಿತ್ಯಿಕ ಸಂಜೆ’ ಕಾರ್ಯಕ್ರಮ ಪ್ಲಾನೆಟೇರಿಯಂ ಸಭಾಂಗಣದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾಷಾಂತರ ತಜ್ಞ ಡಾ.ಎನ್.ಟಿ.ಭಟ್ ಮಾತನಾಡಿ, ಭಾಷೆಗಳಲ್ಲಿ ಸಾಂಸ್ಕೃತಿಕ ವ್ಯತ್ಯಾಸಗಳು ಹೆಚ್ಚಿನ ಸವಾಲು ಗಳನ್ನು ಹೊಂದಿದೆ ಎಂದರು. ಗಣಕ ತಜ್ಞ ಪ್ರೊ.ಕೆ.ಪಿ.ರಾವ್ ಮಾತನಾಡಿ, ಎಲ್ಲ ದ್ರಾವಿಡ ಭಾಷೆಗಳು ಕೂಡ ಸಾಮಾನ್ಯ ವ್ಯಾಕರಣ ಶಾಸ್ತ್ರವನ್ನು ಹೊಂದಿದೆ. ಸಂಸ್ಕೃತಿ, ಕಲೆ, ಭೌಗೋಳಿಕವಾಗಿ ಕರ್ನಾಟಕ-ಕೇರಳ ಒಂದೇ ರೀತಿಯಾಗಿ ಕಾಣುತ್ತದೆ. ಎರಡು ರಾಜ್ಯದ ಜನರು ಉತ್ತಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದ್ದೇವೆ. ಕಲೆ, ಸಾಹಿತ್ಯ ಬೆಳೆಯಲು ಇದು ಪೂರಕವಾಗಿದೆ ಎಂದರು.
ಹಿರಿಯ ಚಿಂತಕ ಪ್ರೊ.ಫಣಿರಾಜ್ ಸಿನಿಮಾ ಕುರಿತು ವಿಶ್ಲೇಷಣೆ ನೀಡಿದರು. ಲೇಖಕಿ ವೈದೇಹಿ ವಿಡೀಯೊ ಸಂದೇಶ ನೀಡಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್‌ನ ಕಾರ್ಯದರ್ಶಿ ವಿ.ಸಿ.ಬಿನೇಶ್ ಮಾತನಾಡಿದರು.
ಕೇಂದ್ರದ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್‌ನ ರಾಜಿ ಕಾರ್ಯಕ್ರಮ ನಿರೂಪಿಸಿದರು.