ಉಡುಪಿ | ಗಗನಸಖಿ ಸಹಿತ ನಾಲ್ವರ ಕಗ್ಗೊಲೆ ಪ್ರಕರಣ; ಶಂಕಿತ ಆರೋಪಿ ಪ್ರವೀಣ್ ಚೌಗಲೆ ತೀವ್ರ ವಿಚಾರಣೆ: ಎಸ್ಪಿ ಡಾ.ಅರುಣ್
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್
ಉಡುಪಿ, ನ.15: ನೇಜಾರುವಿನಲ್ಲಿ ಗಗನಸಖಿ ಸಹಿತ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ವಶಕ್ಕೆ ಪಡೆದಿರುವ ಶಂಕಿತ ಆರೋಪಿ ಪ್ರವೀಣ್ ಅರುಣ್ ಚೌಗಲೆ(39) ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿಂದು ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ವಿಚಾರಣೆಯಲ್ಲಿ ಈ ಕೊಲೆ ಪ್ರಕರಣದಲ್ಲಿ ಆತನ ಪಾತ್ರ ಕಂಡುಬಂದಲ್ಲಿ ಆತನನ್ನು ಬಂಧಿಸಿ ಕಾನೂನು ಪ್ರಕಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು
ಪ್ರಕರಣಕ್ಕೆ ಸಂಬಂಧಿಸಿ ಐದು ತಂಡಗಳನ್ನು ರಚನೆ ಮಾಡಿ ವಿವಿಧ ಆಯಮಗಳಲ್ಲಿ ತನಿಖೆ ನಡೆಸಲಾಗಿತ್ತು. ಮಾಹಿತಿಯಂತೆ ಆರೋಪಿಯನ್ನು ಕುಡುಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ಉಡುಪಿಗೆ ಕರೆದುಕೊಂಡು ಬರಲಾಗಿದೆ. ಇದೀಗ ಆತನನ್ನು ವಿಚಾರಣೆಗೊಳಪಡಿಸಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ ಎಂದರು.
ಕೆಲವೊಂದು ತಾಂತ್ರಿಕ ಹಾಗೂ ಗುಪ್ತಚರ ಮಾಹಿತಿಯಂತೆ ಈ ವ್ಯಕ್ತಿ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದುಕೊಳ್ಳಲಾಗಿದೆ ಆತನ ವಿಚಾರಣೆಯಿಂದ ಕೊಲೆಗೆ ಕಾರಣ ಸೇರಿದಂತೆ ಹಲವು ಮಾಹಿತಿಗಳು ದೊರೆಯಲಿದೆ. ವಿಚಾರಣೆ ಮುಗಿದ ಬಳಿಕ ಕಾನೂನು ಪ್ರಕಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ತಿಳಿಸಿದರು
ಪ್ರಕರಣದ ತನಿಖಾಧಿಕಾರಿ ವರದಿ ನೀಡಿದ ಬಳಿಕ ಹೆಚ್ಚಿನ ಮಾಹಿತಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು. ನಮ್ಮ ಮಾಹಿತಿ ಪ್ರಕಾರ ಆತ ಸಿ.ಐ.ಎಸ್.ಎಫ್. ಹಾಗೂ ಸಿ.ಆರ್.ಪಿ.ಎಫ್.ನಲ್ಲಿ ಇರಲಿಲ್ಲ ಎಂಬುದು ತಿಳಿದು ಬಂದಿದೆ. ಆತ ಸಿವಿಲ್ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸಿರಬಹುದು ಎಂಬ ಮಾಹಿತಿ ದೊರೆತಿದೆ. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದವರು ಹೇಳಿದರು.
ಈ ಪ್ರಕರಣದಲ್ಲಿ ನಾವು 15-20 ಮಂದಿ ಶಂಕಿತರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದೆವು. ಅದೇ ರೀತಿ ಪ್ರವೀಣನನ್ನು ಕೂಡ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್ಪಿ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಯನ್ನು ಸಂಜೆಯ ವೇಳೆ ನೀಡಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ವದಂತಿಗಳನ್ನು ತಡೆಗಟ್ಟಲು ಮತ್ತು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಕರಣದ ವಿವರ:
ನ.12ರಂದು ಬೆಳಗ್ಗೆ ನೇಜಾರಿನ ತೃಪ್ತಿ ಲೇಔಟ್ನಲ್ಲಿ ಹಸೀನಾ( 48), ಮಕ್ಕಳಾದ ಅಫ್ನಾನ್ (23), ಅಯ್ನಾಝ್ (20) ಮತ್ತು ಅಸೀಮ್ (14) ಎಂಬವರನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಚೂರಿ ಇರಿತಕ್ಕೊಳಗಾಗಿದ್ದ ಮೃತ ಹಸೀನಾ ಅವರ ಅತ್ತೆ ಹಾಜಿರಾ ಹಂತಕನಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ಅವಿತು ಜೀವ ಉಳಿಸಿಕೊಂಡಿದ್ದರು.