ಅಖಿಲ ಭಾರತ ಅಂತರ ವಿವಿ ಮಹಿಳಾ ಕ್ರಿಕೆಟ್: ಮೈಸೂರು ವಿವಿಗೆ ಸತತ ಎರಡನೇ ಜಯ
ಸಾಂದರ್ಭಿಕ ಚಿತ್ರ
ಮಣಿಪಾಲ: ಭಾರತೀಯ ವಿವಿ ಸಂಘದ ಸಹಯೋಗದೊಂದಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಇಲ್ಲಿನ ಎಂಡ್ ಪಾಯಿಂಟ್ ಮೈದಾನದಲ್ಲಿ ಯೋಜಿಸಿರುವ 2023-24ನೇ ಸಾಲಿನ ಅಖಿಲ ಭಾರತ ಅಂತರ ವಲಯ ಅಂತರ ವಿವಿ ಮಹಿಳಾ ಕ್ರಿಕೆಟ್ ಟೂರ್ನಿಯ ಎರಡನೇ ದಿನವಾದ ಬುಧವಾರ ಮೈಸೂರು ವಿವಿ ತಂಡ ಸತತ ಎರಡನೇ ಜಯ ದಾಖಲಿಸಿ ಮುಂದಿನ ಹಂತಕ್ಕೇರುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.
ಎ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಬಿಲಾಲಪುರದ ಅಟಲ್ಬಿಹಾರಿ ವಾಜಪೇಯಿ ವಿವಿ ತಂಡವನ್ನು 213 ರನ್ಗಳ ಭರ್ಜರಿ ಅಂತರದಿಂದ ಪರಾಭವಗೊಳಿಸಿದ ಮೈಸೂರು ವಿವಿ ಇಂದು ಇಂದೋರ್ನ ಡಿಎವಿ ವಿವಿಯನ್ನು ಐದು ವಿಕೆಟ್ಗಳ ಅಂತರದಿಂದ ಪರಾಭವಗೊಳಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಡಿಎವಿ ವಿವಿಯನ್ನು 9ವಿಕೆಟ್ಗೆ 83 ರನ್ಗಳಿಗೆ ನಿಯಂತ್ರಿಸಿದ ಮೈಸೂರು ವಿವಿ ಬಳಿಕ ಏದು ವಿಕೆಟ್ ನಷ್ಟಕ್ಕೆ ವಿಜಯಿ ರನ್ ಗಳಿಸಿತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ 45 ರನ್ಗಳಿಸಿದ ಸಲೋನಿ ಪಿ. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನಿನ್ನೆ ವಾಜಪೇಯಿ ವಿವಿ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ವಿವಿ ನಿಗದಿತ ಓವರುಗಳಲ್ಲಿ 2ವಿಕೆಟ್ಗೆ 261 ರನ್ಗಳಿಸಿದ್ದಲ್ಲದೇ ನಂತರ ವಾಜಪೇಯಿ ವಿವಿಯನ್ನು ಕೇವಲ 48 ರನ್ಗಳಿಗೆ ಆಲೌಟ್ ಮಾಡಿತ್ತು.
ಗುಂಪಿನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿವಿ, ಅಟಲ್ ಬಿಹಾರಿ ವಾಜಪೇಯಿ ವಿವಿಯನ್ನು 9 ವಿಕೆಟ್ಗಳಿಂದ ಪರಾಭವಗೊಳಿಸಿತು. ವಾಜಪೇಯಿ ವಿವಿಗೆ ಇದು ಸತತ ಎರಡನೇ ಸೋಲು. ಮೊದಲು ಬ್ಯಾಟಿಂಗ್ ನಡೆಸಿದ ಬಿಲಾಸಪುರ ತಂಡ 67 ರನ್ಗಳಿಗೆ ಆಲೌಟಾದರೆ, ಸಿಮ್ಲಾ ತಂಡ ಒಂದು ವಿಕೆಟ್ಗೆ ವಿಜಯಿ ರನ್ ಗಳಿಸಿತು.
ನಿನ್ನೆ ಮೊದಲ ಪಂದ್ಯದಲ್ಲಿ ಬಿಹಾರದ ಲಲಿತ್ನಾರಾಯಣ್ ಮಿಥಿಲಾ ವಿವಿಗೆ 25 ರನ್ಗಳಿಂದ ಸೋತಿದ್ದ ಕೊಟ್ಟಾಯಂನ ಮಹಾತ್ಮಗಾಂಧಿ ವಿವಿ ಇಂದು ರೋಹ್ಟಕ್ನ ಮಹರ್ಷಿ ದಯಾನಂದ ವಿವಿಯನ್ನು 7 ವಿಕೆಟ್ಗಳಿಂದ ಪರಾಭವಗೊಳಿಸಿತು. ಮಹಾತ್ಮಗಾಂಧಿ ವಿವಿ ನಿಗದಿತ ಓವರುಗಳಲ್ಲಿ 118 ರನ್ಗಳಿಸಿ ಬಳಿಕ ಎದುರಾಳಿಯನ್ನು 96 ರನ್ಗೆ ಆಲೌಟ್ ಮಾಡಿತು.
ಅಮೃತಸರದ ಗುರುನಾನಕ್ ದೇವ್ ವಿವಿ ಸಹ ಸತತ ಎರಡನೇ ಜಯ ಪಡೆಯಿತು. ನಿನ್ನೆ ಪುಣೆ ವಿವಿಯನ್ನು ಸೋಲಿಸಿದ್ದ ಅಮೃತಸರ ವಿವಿ ತಂಡ, ಇಂದು ಕಣ್ಣೂರು ವಿವಿಯನ್ನು 162 ರನ್ಗಳಿಂದ ಏಕಪಕ್ಷೀಯವಾಗಿ ಪರಾಭವಗೊಳಿಸಿತು.