ನಾಡ: ಪೌಷ್ಟಿಕ ಆಹಾರದ ಅರಿವು ಕಾರ್ಯಕ್ರಮ
ಕುಂದಾಪುರ, ಸೆ.14: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಗ್ರಾಮ ಪಂಚಾಯತ್ ನಾಡ, ಮೂರ್ತೆದಾರರ ಸೇವಾ ಸಹಕಾರ ಸಂಘ ನಾಡದ ಸಹಯೋಗದಲ್ಲಿ ಪೋಷಣ್ ಅಭಿಯಾನ ಪ್ರಯುಕ್ತ ಪೋಷಣ್ ಮಾಸಾಚರಣೆ, ಪೌಷ್ಟಿಕ ಆಹಾರದ ಅರಿವು ಕಾರ್ಯಕ್ರಮ ನಾಡ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಪಂ ಉಪಾಧ್ಯಕ್ಷ ಪ್ರತ್ವೀಶ್ ಶೆಟ್ಟಿ ಮಾತನಾಡಿ, ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿಗಳನ್ನು ಉಪಯೋಗಿಸಿ ದಾಗ ನಾವು ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದರು.
ನಾಡ ಗ್ರಾಪಂ ಅಧ್ಯಕ್ಷೆ ಪಾರ್ವತಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೇಷ್ಠ ವೈದ್ಯ ರಾಜ್ಯ ಪ್ರಶಸ್ತಿ ಪಡೆದ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಚಿಕ್ಮರಿ ಅವರನ್ನು ಸನ್ಮಾನಿಸಲಾಯಿತು. ಪೋಷಣ್ ಅಭಿಯಾನ ಕಾರ್ಯ ಕ್ರಮದ ಮಹತ್ವದ ಬಗ್ಗೆ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಹಾಗೂ ಮರವಂತೆಯ ವಲಯದ ಮೇಲ್ವಿಚಾರಕಿ ಬೇಬಿ ತಿಳಿಸಿದರು.
ಪೋಷಣ್ ಅಭಿಯಾನದ ಕುಂದಾಪುರ ತಾಲ್ಲೂಕಿನ ಸಂಯೋಜಕ ಮಂಜುನಾಥ ಮಾಹಿತಿ ನೀಡಿದರು. ಗ್ರಾಮದ ಹಿರಿಯ ರಾದ ಲಚ್ಚು ಆಹಾರ ಪದ್ಧತಿಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ 9 ಮಂದಿ ಗರ್ಭಿಣಿಯರಿಗೆ ಸೀಮಂತದ ಬಾಗಿನ ನೀಡಲಾಯಿತು.
ಗ್ರಾ.ಪಂ ಸದಸ್ಯರಾದ ಉದಯ ಜೋಗಿ, ಮೂರ್ತೆದಾರರ ಸೇವಾ ಸಹಕಾರ ಸಂಘ ನಾಡ ಶಾಖೆಯ ಕಾರ್ಯದರ್ಶಿ ನಾಗರತ್ನ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸುಶೀಲ ನಾಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.