ನಾರಾಯಣಗುರು ಧಾರ್ಮಿಕ ಗುರುವಿನ ರೂಪದ ಸಮಾಜ ಸುಧಾರಕ: ದಿನೇಶ್ ಅಮೀನ್ ಮಟ್ಟು
ಉಡುಪಿ, ಆ.19: ನಾರಾಯಣಗುರುಗಳು ಧಾರ್ಮಿಕ ಗುರುವಿನ ವೇಷದಲ್ಲಿದ್ದ ಸಮಾಜ ಸುಧಾಕರರು. ಧರ್ಮದ ಹೆಸರಿ ನಲ್ಲಿ ಅವರು ಸಮಾಜ ಸುಧಾರಕರಾಗಿ ಕೆಲಸ ಮಾಡಿದ್ದಾರೆ ಎಂದು ಹಿರಿಯ ಪತ್ರಕರ್ತ ಹಾಗೂ ಚಿಂತಕ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.
ನಗರದ ಎಂಜಿಎಂ ಕಾಲೇಜಿನ ಉಪನ್ಯಾಸಕಿ ಶಾರದಾ ಮೂಡುಸಗ್ರಿ ಅವರು ಗತಿಸಿದ ತಮ್ಮ ತಾಯಿಯ ಹೆಸರಿನಲ್ಲಿ ಹಮ್ಮಿಕೊಂಡ ಉಪನ್ಯಾಸ ಮಾಲಿಕೆಯಲ್ಲಿ ದಿನೇಶ್ ಅಮೀನ್ ಮಟ್ಟು ಅವರು ‘ನಾರಾಯಣಗುರುಗಳ ಆದರ್ಶ’ ಎಂಬ ವಿಷಯದ ಕುರಿತು ಮಾತನಾಡಿದರು.
ಕರಾವಳಿ ಜಿಲ್ಲೆಗಳಲ್ಲಿ 300ಕ್ಕೂ ಅಧಿಕ ನಾರಾಯಣಗುರು ಮಂದಿರಗಳಿವೆ. ಸಮಾಜ ಸುಧಾರಕರೊಬ್ಬರ ಮಂದಿರ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿರುವ ಬೇರೆ ಉದಾಹರಣೆ ಇರಲಿಕ್ಕಿಲ್ಲ. ಆದರೆ ಬಿಲ್ಲವ ಸಮಾಜದ ಪ್ರಮುಖ ನಾಯಕರು ಗುರುಗಳ ಬಗ್ಗೆ, ಅವರ ತತ್ವ ಸಿದ್ಧಾಂತಗಳ ಬಗ್ಗೆ ಗಟ್ಟಿಧ್ವನಿಯಲ್ಲಿ ಮಾತನಾಡಲು ವಿಫಲರಾಗುತಿದ್ದಾರೆ ಎಂಬುದು ದುರಂತ ಎಂದರು.
ಧರ್ಮವನ್ನು ಬಿಟ್ಟು ಜಾತ್ಯತೀತ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ. ಆದರೆ ಈ ಧರ್ಮ ಯಾವುದು? ನಾರಾಯಣಗುರು ಗಳು, ಸ್ವಾಮಿ ವಿವೇಕಾನಂದರು, ಕುವೆಂಪು ಅವರು ಹೇಳಿದ ಧರ್ಮದ ಬಗ್ಗೆ ಆಕ್ಷೇಪಗಳಿಲ್ಲ. ಆದರೆ ಮೋಹನ್ ಭಾಗವತ್, ಆರೆಸ್ಸೆಸ್ಸ್ ಪ್ರತಿಪಾದಿಸುವ ಧರ್ಮದ ಬಗ್ಗೆ ವಿರೋಧವಿದೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.
ನಾರಾಯಣಗುರುಗಳು ಕೇರಳದಲ್ಲಿ ಮೊದಲ ಮಂದಿರ ಸ್ಥಾಪಿಸಿದ್ದು 1888ರಲ್ಲಿ ಅರವಿಪುರಂನಲ್ಲಿ. ಅದು ಅಸ್ಪೃಶ್ಯನೊಬ್ಬ ಅಸ್ಪೃಶ್ಯರಿಗಾಗಿ ನಿರ್ಮಿಸಿದ್ದ ಮೊದಲ ಸ್ಪಶ್ಯ ದೇವಾಲಯವಾಗಿತ್ತು. ಕೇರಳದಲ್ಲಿ ಗುರುಗಳು ಇಂಥ 100ಕ್ಕೂ ಅಧಿಕ ದೇವಾಲಯಗಳನ್ನು ಸ್ಥಾಪಿಸಿದರು ಎಂದರು.
ಗುರುಗಳ ಸಮಾಜ ಸುಧಾರಣಾ ಚಳವಳಿ ವ್ಯಾಪಕವಾಗಿ ಹಬ್ಬಿದ ಪರಿಣಾಮ ಕೇರಳದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಚಿತ್ರಣವೇ ಬದಲಾಯಿತು. ಅಲ್ಲೀಗ ಶೇ.100ರಷ್ಟು ಸಾಕ್ಷರತೆ ಇದ್ದು, ಇದರಿಂದ ಕೋಮುವಾದ ಎಷ್ಟೇ ಪ್ರಯತ್ನ ಪಟ್ಟರೂ ಕೇರಳದಲ್ಲಿ ಗಟ್ಟಿಯಾಗಿ ಕಾಲೂರಲು ಸತತವಾಗಿ ವಿಫಲವಾಗುತ್ತಿದೆ. ಗುರುಗಳ ಕಾರಣದಿಂದಾಗಿಯೇ ಆರೋಗ್ಯ, ಶಿಕ್ಷಣ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೇರಳ ಇಂದು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು.
ಆದರೆ ನಮ್ಮ ಕರಾವಳಿಯ ಬಿಲ್ಲವ ಸಮಾಜ ಇಂದು ಏನಾಗಿದೆ. ಗುರುಗಳ ಹೆಸರಿನಲ್ಲಿ ನಾವು ಭವ್ಯವಾದ ಮಂದಿರವನ್ನು ಜಿಲ್ಲೆಯುದ್ದಕ್ಕೂ ನಿರ್ಮಿಸಿದ್ದೇವೆ. ಕುದ್ರೋಳಿಯಲ್ಲಿ ಲಕ್ಷಾಂತರ ರೂ.ಖರ್ಚು ಮಾಡಿ ಭವ್ಯ ದೇವಸ್ಥಾನ ನಿರ್ಮಿಸಿದ್ದೇವೆ. ಮಂದಿರಗಳಲ್ಲಿ ಪ್ರತಿದಿನ ಭಜನೆ ನಡೆಯುತ್ತದೆ.ಆದರೆ ಬಿಲ್ಲವರು ಎಲ್ಲಿಯಾದರೂ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜನ್ನು ಕಟ್ಟಿದ್ದು ಇದೆಯಾ ಎಂದವರು ಪ್ರಶ್ನಿಸಿದರು.
ಇಂದು ಏನಾಗುತ್ತಿದೆ ಎಂದರೆ ನಾರಾಯಣಗುರುಗಳನ್ನು ವೈಭವೀಕರಿಸಿ ಅವರನ್ನು ದೇವರು ಮಾಡಿ ಊರೆಲ್ಲಾ ಗುಡಿ ಗಳನ್ನು ಕಟ್ಟಲಾಗಿದೆ. ಆದರೆ ಅವರು ಪ್ರತಿಪಾದಿಸಿದ ತತ್ವಗಳನ್ನೆಲ್ಲಾ ಅರ್ಥಮಾಡಿಕೊಳ್ಳದೇ ಗಾಳಿಗೆ ತೂರಲಾಗಿದೆ. ನಾರಾಯಣಗುರುಗಳ ಚಳವಳಿ ಎಂಬುದು ನಾಲ್ಕೈದು ಚಳವಳಿಗಳ ಮಿಶ್ರಣವಾಗಿದೆ.ಡಾ.ಪದ್ಮನಾಭ ಪಲ್ಪು, ಕುಮಾರ ಆಶಾನ್, ಟಿ.ಕೆ.ಮಾಧವನ್, ಕೇಶವನ್ ಅವರು ಸಮಾಜ ಜಾಗೃತಿ, ಶಿಕ್ಷಣ, ಅಸ್ಪಶ್ಯತೆ ವಿರುದ್ಧ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆಸಿದ ಚಳವಳಿ ಇದರಲ್ಲಿ ಸೇರಿತ್ತು ಎಂದರು.
ವೈದಿಕ ದೇವಾಲಯಗಳು ಅಸ್ಪಶ್ಯರಿಗೆ ಪ್ರವೇಶ ನಿರಾಕರಿಸಿದ್ದರಿಂದ ಇವರಿಗಾಗಿಯೇ ದೇವಾಲಯಗಳನ್ನು ಗುರುಗಳು ತೆರೆದರೆ, ಇಂದು ವೈದಿಕ ದೇವಾಲಯಗಳ ಹುಂಡಿ ತುಂಬುವುದು ಶೂದ್ರರ ದುಡ್ಡಿನಿಂದ. ಗುರುಗಳು ಪೂಜಾ ವಿಧಾನವನ್ನು ಸರಳಗೊಳಿಸಿದರೆ, ಇಂದು ವೈದಿಕರ ಪೂಜಾ ಸಂಪ್ರದಾಯವೇ ವಿಜೃಂಭಿಸುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
‘ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲವಂತರಾಗಿ’ ಎಂಬ ಗುರುಗಳ ಮಾತನ್ನು ನಾವು ಮರೆತಿದ್ದೇವೆ. ಹೀಗಾಗಿ ನಮ್ಮವರು ಬೌದ್ಧಿಕವಾಗಿ ವಿಕಸನಗೊಳ್ಳುತ್ತಿಲ್ಲ. ಗುರುಗಳು ವಿರೋಧಿಸಿದ್ದ ಮೂಢನಂಬಿಕೆ ಹಾಗೂ ಕಂದಾಚಾರ ಗಳಿಗೆ ಮತ್ತೆ ಶರಣಾಗುತಿದ್ದೇವೆ. ಈ ಮೂಲಕ ವೈದಿಕ ಪರಂಪರೆಯನ್ನು ಮುರಿದು ಹಾಕಿದವರು ನಾರಾಯಣಗುರುಗಳು ಎಂಬುದನ್ನು ನಾವು ಮರೆತು ಬಿಟ್ಟಿದ್ದೇವೆ ಎಂದರು.
ಮದ್ಯ ಮಾಡಬೇಡಿ, ಮಾರಬೇಡಿ, ಕುಡಿಯಬೇಡಿ ಎಂದ ಅವರ ಮಾತಾಗಲಿ, ಸರಳ ವಿವಾಹದ ಕರೆಯಾಗಲೀ ನಮಗಿಂದು ಬೇಡವಾಗಿದೆ. ನಾರಾಯಣ ಗುರುಗಳ ತತ್ವವನ್ನು ನೀವು ಒಪ್ಪಿದ್ದೇ ಹೌದಾದರೆ, ದುಂದು ವೆಚ್ಚವನ್ನು ವಿರೋಧಿಸಿ, ಸರಳ ಮದುವೆ ಮಾಡಿ ಹಾಗೂ ಮೂಢನಂಬಿಕೆಗಳಿಂದ ಹೊರಬನ್ನಿ ಎಂದು ಅವರು ಕರೆ ನೀಡಿದರು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸಿನ್ ಮಲ್ಪೆ ಉಪಸ್ಥಿತರಿದ್ದರು. ಸಾಮಾಜಿಕ ಹಾಗೂ ಪರಿಸರ ಹೋರಾಟ ಗಾರ ಕಲ್ಕುಳಿ ವಿಠಲ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ಮೂಡುಸಗ್ರಿ ಅವರು ತಮ್ಮ ತಾಯಿಯ ನೆನಪುಗಳನ್ನು ಮೆಲುಕು ಹಾಕಿದರು. ಉಪನ್ಯಾಸಕ ಸುಚೇತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.