ತೆಂಕನಿಡಿಯೂರು ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ; ಬೃಹತ್ ರಕ್ತದಾನ ಶಿಬಿರ
ಉಡುಪಿ, ಆ.29: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಆಸ್ಪತ್ರೆ ಉಡುಪಿ ಹಾಗೂ ಲಯನ್ಸ್ ಕ್ಲಬ್ ಅಮೃತ್ ಉಡುಪಿ ಇದರ ಸಹಯೋಗದಲ್ಲಿ ರಾಷ್ಟ್ರೀಯ ರೆಡ್ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ದೈಹಿಕ ಶಿಕ್ಷಣ ಇಲಾಖೆಗಳ ನೇತೃತ್ವದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಂಗಳವಾರ ಉದ್ಘಾಟಿಸಿದರು.
ವಿದ್ಯಾರ್ಥಿ ದಿಸೆಯಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಶ್ರದ್ಧೆ ಮತ್ತು ಕರ್ತವ್ಯ ನಿಷ್ಠೆಯನ್ನು ಪಾಲಿಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡಲ್ಲಿ ಬದುಕಿನಲ್ಲಿ ಯಶಸ್ಸು ಮತ್ತು ಸ್ವಾವಲಂಬನೆ ಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ವಿದ್ಯಾರ್ಥಿಗಳಿಗೆ ಕರೆಯಿತ್ತರು.
ಕಾಲೇಜು ಹಂತದಲ್ಲಿ ಯಾವುದೇ ಆಶೆ-ಆಮಿಷಗಳಿಗೆ ಬಲಿ ಬೀಳದೇ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಲ್ಲಿ ಉತ್ತಮ ಪ್ರಜೆಯಾಗಿ ದೇಶಕ್ಕೆ ಕೊಡುಗೆ ನೀಡಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಸುರೇಶ್ ರೈ ಕೆ. ವಹಿಸಿದ್ದರು. ಡಾ. ವೀಣಾ ಇವರು ರಕ್ತದಾನದ ಮಹತ್ವವನ್ನು ಮತ್ತು ಅಗತ್ಯವನ್ನು ವಿವರಿಸಿದರು. ಲಯನ್ ಅಮೃತ್ ಅಧ್ಯಕ್ಷೆ ಭಾರತಿ ಎಚ್.ಎನ್. ಹಾಗೂ ರೆಡ್ಕ್ರಾಸ್ ಉಡುಪಿಯ ಜಿಲ್ಲಾಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ. ಪ್ರಸಾದ್ ರಾವ್ ಎಂ. ವಂದಿಸಿದರು. ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.