ರಾಜ್ಯದಲ್ಲಿ 100ದಿನದೊಳಗೆ ನೂತನ ಕಾನೂನು ನೀತಿ: ಎಚ್.ಕೆ.ಪಾಟೀಲ್
ಉಡುಪಿ, ಆ.7: ರಾಜ್ಯದಲ್ಲಿ 100 ದಿನದೊಳಗೆ ಕಾನೂನು ಇಲಾಖೆಗೆ ಸಂಬಂಧಿಸಿ ನೂತನ ನೀತಿ ಮತ್ತು ಕ್ರಿಯಾ ಯೋಜನೆಯನ್ನು ರೂಪಿಸಲಾಗು ವುದು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಕುಂಜಿಬೆಟ್ಟಿನ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿರುವ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ಶನಿವಾರ ಭೇಟಿ ನೀಡಿ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಮೋಡೆಲ್ ಅವರೊಂದಿಗೆ ಮಾತುಕತೆ ನಡೆಸಿ ಅವರು ಮಾತನಾಡುತಿದ್ದರು. ಪ್ರತಿಷ್ಠಾನದ ಕಾರ್ಯವೈಖರಿ ಗದಗ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ವಿಸ್ತರಣೆಯಾಗಬೇಕು. ಈ ಮೂಲಕ ಬಡಜನರಿಗೆ ಕಾನೂನು ನೆರವು ಸಿಗಬೇಕೆಂದು ಸಚಿವರು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಮಾತನಾಡಿ, ಸಂಸ್ಥೆ ಯಾವುದೇ ಡೊನೇಶ್, ದೇಣಿಗೆ ಸಾರ್ವಜನಿಕರಿಂದ ಪಡೆಯೋದಿಲ್ಲ. ಸರಕಾರಿ ಅನುದಾನಕ್ಕೂ ಕೈ ಚಾಚುತ್ತಿಲ್ಲ. ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ. ಸ್ವಯಂ ಸೇವಕರು, ವಕೀಲರ ಉಚಿತ ಸೇವೆಯ ಮೂಲಕ ಖರ್ಚಿಲ್ಲದೆ ಬಡಜನರಿಗೆ ಸೇವೆ ನೀಡುವ ಬದ್ಧತೆಯಿಂದಷ್ಟೇ ಕೆಲಸ ಮಾಡಲಾಗುತ್ತಿದೆ. ದೊಡ್ಡ ಆಸ್ಪತ್ರೆಗಳು ಮೆಡಿಕಲ್ ಕಾಲೇಜು ಹೊಂದುವಂತೆ ಕಾನೂನು ಕಾಲೇಜಿಗೆ ಲೀಗಲ್ ಕ್ಲಿನಿಕ್ ವ್ಯವಸ್ಥೆ ಬೇಕು ಎಂದರು.
ಪ್ರತಿಷ್ಠಾನಕ್ಕೆ ಬರುವ ಪ್ರಕರಣಗಳಲ್ಲಿ ಶೇ.70ರಷ್ಟು ಪ್ರಕರಣಗಳು ರಾಜ್ಯ, ಕೇಂದ್ರ ಸರಕಾರದ ವಿರುದ್ಧವಿರುತ್ತದೆ. ಅನುದಾನ ತೆಗೆದುಕೊಂಡರೆ ಲೆಕ್ಕ ಇಡಬೇಕು ಮತ್ತು ಕೊಡಬೇಕು. 43 ವರ್ಷಗಳಿಂದ ಬಂದ 40,000 ಪ್ರಕರಣಗಳಲ್ಲಿ ಶೇ.80ರಷ್ಟನ್ನು ಕೋರ್ಟಿನ ಹೊರಗೆ ಇತ್ಯರ್ಥ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಚಿದಾನಂದ ಪಾಟೀಲ್, ಎಸ್.ಕೆ.ಪಾಟೀಲ್, ಡಾ. ನಿರ್ಮಲಾ ಕುಮಾರಿ, ಎಂ.ಎ.ಗಫೂರ್, ಅಶೋಕ್ ಕುಮಾರ್ ಕೊಡವೂರು, ನದಾಫ್ ಮೊದಲಾದವರು ಉಪಸ್ಥಿತರಿದ್ದರು.