ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ ಅಂತ್ಯ
ಉಡುಪಿ, ಅ.5: ಪರವಾನಿಗೆ ರಹಿತ ಕಟ್ಟಡ ಸಾಮಗ್ರಿ ಸಾಗಾಟ ವಾಹನ ಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸುತ್ತಿರುವುದನ್ನು ವಿರೋಧಿಸಿ ಕಳೆದ 10 ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ನಡೆಸುತ್ತಿರುವ ಅನಿಧಿಷ್ಟಾವಧಿ ಮುಷ್ಕರವನ್ನು ಮುಖ್ಯಮಂತ್ರಿಗಳ ನಿರ್ಧಾರದ ಹಿನ್ನೆಲೆಯಲ್ಲಿ ಅಂತ್ಯಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕಟ್ಟಡ ಸಾಮಾಗ್ರಿ ಲಾರಿ, ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟದ ಪ್ರಮುಖ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಮರಳು, ಕೆಂಪುಕಲ್ಲು ಸಮಸ್ಯೆಗೆ ಸಂಬಂಧಿಸಿ ಬೆಂಗಳೂರಿ ನಲ್ಲಿ ಇಂದು ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಪರವಾನಿಗೆ ಇರುವ ಸಾಮಗ್ರಿ ಸಾಗಾಟದ ವಾಹನಗಳಿಗೆ ಯಾವುದೇ ತಡೆ ನೀಡಬಾರದು ಮತ್ತು ಕಲ್ಲು ಸಾಗಾಟಕ್ಕೆ ಪರವಾನಿಗೆ ಪಡೆಯುವ ಕ್ರಮವನ್ನು ಸರಳೀಕರಣಗೊಳಿಸುವ ಕುರಿತು ಸಭೆಯಲ್ಲಿ ನಿರ್ಧಾರ ತೆಗೆದು ಕೊಳ್ಳಲಾಗಿದೆ. ಅದೇ ರೀತಿ ನಾವು ನಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಒಪ್ಪಿಗೆ ಸೂಚಿಸಿದ್ದೇವೆ. ಒಟ್ಟಾರೆಯಾಗಿ ನಮ್ಮ ಶೇ.50ರಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡಿದೆ. ಆದುದರಿಂದ ನಮ್ಮ ಮುಷ್ಕರವನ್ನು ಕೈಬಿಟ್ಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.