ಗ್ಯಾಸ್ ಸಂಪರ್ಕಕ್ಕೆ ಕೆವೈಸಿ: ಇಲಾಖೆಯಿಂದ ಸ್ಪಷ್ಟೀಕರಣ
ಉಡುಪಿ: ಮನೆಯ ಅನಿಲ ಸಂಪರ್ಕಕ್ಕೆ ಸಂಬಂಧಿಸಿದಂತೆ ಮಾಹಿತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಂತೆ ಡಿ.31ರೊಳಗೆ ಅನಿಲ ಸಂಪರ್ಕ ಇದ್ದವರು ಆಧಾರ ಸಂಖ್ಯೆಯೊಂದಿಗೆ ಕೆವೈಸಿ ಮಾಡಿಸಬೇಕು. ಇದರಿಂದ ಜ.1ರಿಂದ ಸಬ್ಸಿಡಿ (903ರಿಂದ 500ಕ್ಕೆ) ಸಿಗುತ್ತದೆ. ಇಲ್ಲದಿದ್ದರೆ ಸಬ್ಸಿಡಿ ರಹಿತವಾಗಿ ಸಂಪರ್ಕ ಕಮರ್ಷಿಯಲ್ ಆಗಿ ಮಾರ್ಪಟ್ಟು ಸಿಲಿಂಡರ್‌ಗೆ 1400ರೂ. ನೀಡ ಬೇಕಾಗುತ್ತದೆ ಎಂಬುದೇ ಈ ಸಂದೇಶವಾಗಿತ್ತು.
ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆ ಜನರು ಗ್ಯಾಸ್ ಪಡೆದ ಎಜೆನ್ಸಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ತೆರಳಿ ಕೈವೈಸಿ ಮಾಡಿಸಲು ಧಾವಿಸಿದ್ದು, ಅಂಗಡಿ ಮುಂದೆ ನೂಕುನುಗ್ಗಲು ಉಂಟಾಗುತ್ತಿದೆ. ಜನರು ಉದ್ದನೆ ಕ್ಯೂನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.
ಈ ಬಗ್ಗೆ ಉಜ್ವಲ ಯೋಜನೆಯ ನೋಡಲ್ ಅಧಿಕಾರಿ ರಾಹುಲ್ ಅವರನ್ನು ಸಂಪರ್ಕಿಸಿ ವೈರಲ್ ಆಗಿರುವ ಸಂದೇಶದ ಕುರಿತು ಪ್ರಶ್ನಿಸಿದಾಗ, ಅದೊಂದು ಫೇಕ್ ಸುದ್ದಿ ಎಂದು ತಳ್ಳಿ ಹಾಕಿದರು. ಕೆವೈಸಿ ಮಾಡಿರುವವರಿಗೆ ಸಬ್ಸಿಡಿ ಮತ್ತೆ ನೀಡುವ ಹಾಗೂ ಮಾಡಿಸದಿದ್ದವರಿಗೆ ಸಿಲಿಂಡರ್ ಒಂದರ ದರ ಹೆಚ್ಚಾಗುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯ ದಿಂದ ಬಂದಿರುವ ನೋಟಿಫಿಕೇಷನ್‌ನಲ್ಲಿ ಕೇಂದ್ರ ಸರಕಾರದ ಉಜ್ವಲ (ಪಿಎಂಯುವೈ) ಹಾಗೂ ಪಹಲ್ (ಪಿಎಎಚ್‌ಎಎಲ್) ಯೋಜನೆಯ ಫಲಾನುಭವಿಗಳ ಗ್ಯಾಸ್ ಸಂಪರ್ಕವನ್ನು ಆಧಾರ್ ದೃಢೀಕರಣದೊಂದಿಗೆ ಆದ್ಯತೆಯ ನೆಲೆಯಲ್ಲಿ ಕೆವೈಸಿ ಮಾಡುವ ಸೂಚನೆ ಮಾತ್ರ ಇದ್ದು ಬೇರೆ ಯಾವುದೇ ಪ್ರಸ್ತಾಪವೂ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗ್ಯಾಸ್ ಸಂಪರ್ಕ ಹೊಂದಿರುವವರೆಲ್ಲರೂ ಕೈವೈಸಿ ಮಾಡಿಸಬೇಕು. ಆದರೆ ಅವರಿಗೆ ಯಾವುದೇ ಸಮಯವನ್ನು ನಿಗದಿ ಪಡಿಸಿಲ್ಲ. ಕೊನೆಯ ದಿನವನ್ನೂ ತಿಳಿಸಿಲ್ಲ. ಸಬ್ಸಿಡಿ ಮತ್ತೆ ನೀಡುವ ಪ್ರಸ್ತಾಪವಂತೂ ಇಲ್ಲವೇ ಇಲ್ಲ. ಈಗ ಉಜ್ವಲ ಫಲಾನು ಭವಿಗಳನ್ನು ಹೊರತು ಪಡಿಸಿ ಬೇರೆ ಯಾರಿಗೂ ಅನಿಲದ ಸಿಲಿಂಡರ್‌ನಲ್ಲಿ ಸಬ್ಸಿಡಿ ಸಿಗುತ್ತಿಲ್ಲ. ಹೀಗಾಗಿ ಬಳಕೆದಾರರು ಗೊಂದಲಕ್ಕೊಳ ಗಾಗಬಾರದು ಎಂದು ಅವರು ತಿಳಿಸಿದರು.