ದಲಿತರ ಮನೆಗಳಿಗೆ ಶ್ರೀರಾಮನ ಮಂತ್ರಾಕ್ಷತೆ ತಂದರೆ ನಿರಾಕರಿಸಿ: ಜಯನ್ ಮಲ್ಪೆ
ಮಲ್ಪೆ, ಜ.3: ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕು ಸ್ಥಾಪನೆಗೆ ರಾಷ್ಟ್ರಪತಿ ದಲಿತೆ ಎಂಬ ಏಕೈಕ ಕಾರಣಕ್ಕೆ ದೂರವಿಟ್ಟವರು, ಧಾರ್ಮಿಕತೆಯೆಂದು ಜಾತೀಯತೆ ಮಾಡುವವರು ಕೇವಲ ಓಟಿಗಾಗಿ ದಲಿತರ ಮನೆಗಳಿಗೆ ಶ್ರೀ ರಾಮನ ಮಂತ್ರಾಕ್ಷತೆ ತಂದರೆ ನಿರಾಕರಿಸಿ ಎಂದು ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಕರೆ ನೀಡಿದ್ದಾರೆ.
ಅಂಬೇಡ್ಕರ್ ಯುವಸೇನೆ ವತಿಯಿಂದ ಮಲ್ಪೆ ಸರಸ್ವತಿ ಬಯಲು ರಂಗ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆಯವರ 193ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹಿಂದೂ ಧರ್ಮದ ದೇವರುಗಳ ಕೊಳಕನ್ನು ಎತ್ತಿ ತೋರಿಸುವ ಕೆಲಸವನ್ನು ಅಂಬೇಡ್ಕರ್ ಮಾಡಿದ್ದಾರೆ. ರಾಮಾಯಾಣದ ಮೌಲ್ಯಗಳು ನಮ್ಮ ಸಾಮಾಜಿಕ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತಿವೆ ಎಂದ ಅವರು, ವರದಕ್ಷಿಣೆ ತರದ ಹೆಣ್ಣಿಗೆ ಬೆಂಕಿ, ಸ್ವಾತಂತ್ರ್ಯ ಬಯಸುವ ದಲಿತರಿಗೆ ಹೇಲು ತಿನ್ನಿಸುವುದು, ಕುಡಿಯಲೂ ನೀರು ಕೊಡದೆ, ದೇವರನ್ನೂ ನೋಡಲು ಬಿಡದೆ, ಮೂಕ ಹೆಣ್ಣುಗಳ ಮೇಲಿನ ಅತ್ಯಾಚಾರಗಳೆಲ್ಲವೂ ರಾಮಾಯಣದಿಂದ ಸ್ಫೂರ್ತಿಯನ್ನು ಪಡೆದಿದೆ ಎಂದರು.
ನಿಜವಾಗಿ ಭಾರತದ ದಲಿತ ಹೆಣ್ಣುಮಕ್ಕಳ ಭವಿಷ್ಯವನ್ನು ಶಿಕ್ಷಣದ ಮೂಲಕ ಬೆಳಕಿಗೆ ತಂದು ಹೊಸ ಇತಿಹಾಸ ಸೃಷ್ಟಿಸಿದ್ದ ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ ದಲಿತರ ಪಾಲಿನ ನಂದಾದೀಪ. ದೇಶದ ಸಂಪ್ರದಾಯವಾದಿಗಳು, ಮನುವಾದಿಗಳು ಹುಟ್ಟುಹಾಕಿದ ದೇವರು, ಧರ್ಮ, ಮೂಢನಂಬಿಕೆ, ಅಸಮಾನತೆ, ಅಸ್ಪಶ್ಯತೆಯಿಂದ ತಳ ಸಮುದಾಯಗಳು ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾಗಿದ್ದ ಕಾಲಘಟ್ಟದಲ್ಲಿ ಸಾವಿತ್ರಿ ಬಾಯಿ ಪುಲೆ ಗಟ್ಟಿತನವೇ ನಮಗೆಲ್ಲ ಆದರ್ಶವಾಗಬೇಕು ಎಂದು ಅವರು ತಿಳಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ತೊಟ್ಟಂ ಮಾತನಾಡಿ, ದಲಿತರು, ಶೂದ್ರರು ಮತ್ತು ಮೇಲ್ಜಾತಿ ಸೇರಿದಂತೆ ಎಲ್ಲಾ ಮಹಿಳೆಯರಿಗೆ ಕಠಿಣ ಸಾಮಾಜಿಕ ಪರಿಸ್ಥಿತಿಯಲ್ಲಿ ಅಪಾರ ಕಷ್ಟಗಳನ್ನು ಎದುರಿಸಿ ಅಕ್ಷರ ಕಲಿಸಿದ ಸಾವಿತ್ರಿ ಬಾಯಿ ಸಾಧನೆ ಬಗ್ಗೆ ನಮ್ಮ ಸಮಾಜದಲ್ಲಿ ಹೆಚ್ಚು ಪ್ರಚಾರ ಸಿಕ್ಕಿಲ್ಲ ಎಂದರು.
ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿದರು. ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ರವಿರಾಜ್ ಲಕ್ಷ್ಮೀನಗರ, ನಾಗೇಶ್ ನೆರ್ಗಿ, ವಸಂತ ಅಂಬಲಪಾಡಿ, ಅರುಣ್ ಸಲ್ಯಾನ್, ಭಗವಾನ್ ಮಲ್ಪೆ, ದೀಪಕ್ ಕೊಡವೂರು, ನವೀನ್ ಬನ್ನಂಜೆ, ಪ್ರಸಾದ್ ಮಲ್ಪೆ, ರತನ್ ನೆರ್ಗಿ, ಕೃಷ್ಣ ಶ್ರೀಯಾನ್, ಪ್ರಶಾಂತ್ ಕಾಂಚನ್ ನೆರ್ಗಿ, ಕಲಾವತಿ ತೊಟ್ಟಂ, ಸಂಕಿ ತೊಟ್ಟಂ, ಸಂಧ್ಯಾ ಕೃಷ್ಣ ಶ್ರೀಯಾನ್, ಹರೀಶ್ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.
ಸುಕೇಶ್ ಪುತ್ತೂರು ಸ್ವಾಗತಿಸಿದರು. ದಯಾಕರ ಮಲ್ಪೆ ವಂದಿಸಿದರು.