‘ಉಡುಪಿ ಜಿಲ್ಲಾ ಬರಹಗಾರರ ಕೋಶ’ ಕೃತಿ ಅನಾವರಣ
ಉಡುಪಿ: ಡಾ.ಅನಿಲ್ ಕುಮಾರ್ ಅವರ ಕ್ಷೇತ್ರ ಕಾರ್ಯದ ಸಂಶೋಧನಾ ಕೃತಿ, ಭವಿಷ್ಯದಲ್ಲಿ ಸಾಹಿತ್ಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅಧ್ಯಯನ ಆಕಾಂಕ್ಷಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಆಕರ ಗ್ರಂಥವಾಗುವುದರಲ್ಲಿ ಸಂಶಯವಿಲ್ಲ ಎಂದು ಸಾಹಿತ್ಯ ಚಿಂತಕ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಿವೃತ್ತ ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ಅವರು ರಚಿಸಿದ ‘ಜಿಲ್ಲಾ ಬರಹಗಾರರ ಕೋಶ’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಇದೊಂದು ಕೋಶವಾಗಿರದೇ ಗುಡಾಣದ ಗಾತ್ರ ಹೊಂದಿದೆ. ಕ್ಷೇತ್ರ ಕಾರ್ಯದ ವೇಳೆ ಸಂಶೋಧಕ ಡಾ.ಅನಿಲ್ ಕುಮಾರ್ ಉಡುಪಿ ಜಿಲ್ಲೆಯ ಬಗ್ಗೆ ಮಾಹಿತಿಗಳ ದೊಡ್ಡ ಕಣಜವನ್ನೇ ಕಲೆಹಾಕಿದ್ದು, ತಾನು ಬರೆದ ಸುದೀರ್ಘ ಮುನ್ನುಡಿಯಲ್ಲಿ ಅದನ್ನು ವಿವರವಾಗಿ ಪ್ರಸ್ತಾಪಿಸಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಾಂಗತ್ಯ ಛಂದಸ್ಸು ನೀಡಿದ ಕಾರ್ಕಳದ ಕಲ್ಯಾಣಕೀರ್ತಿ ಬಗ್ಗೆ, ದಾಸ ಸಾಹಿತ್ಯಕ್ಕೆ ಉಡುಪಿಯ ಅಚ್ಚರಿ ಕೊಡುಗೆ ಬಗ್ಗೆ, ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾಗಿದ್ದ ನೇಕಾರಿಕೆ ಅಳಿಯಲು ಕಾರಣಗಳ ಬಗ್ಗೆ ಇಲ್ಲಿ ಹೊಸ ಬೆಳಕು ಚೆಲ್ಲಲಾಗಿದೆ ಎಂದು ಡಾ.ವರದರಾಜ ಚಂದ್ರಗಿರಿ ನುಡಿದರು.
ಜಿಲ್ಲಾ ಬರಹಗಾರರ ಕೋಶವನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಸುಬ್ಬಣ್ಣ ರೈ, ಸಂಶೋಧನೆ ಎಂಬುದು ಪದವಿಗೆ ಪಾತ್ರ ಸೀಮಿತವಾಗಬಾರದು. ಹವ್ಯಾಸಿ ಸಂಶೋಧನೆ ನಿರಂತರ ಇರಬೇಕು ಎಂದ ಅಭಿಪ್ರಾಯಪಟ್ಟರಲ್ಲದೇ, ಈ ಕೃತಿ ಮುಂದಿನ ತಲೆಮಾರಿನ ಸಂಶೋಧಕರಿಗೆ ಅಕಾರಗ್ರಂಥವಾಗಲಿದೆ ಎಂದರು.
ಅನಿಲ್‌ಕುಮಾರ್ ಅವರು ಪಿಎಚ್‌ಡಿ ಪದವಿ ಅನಂತರವೂ ಬಿಡುವಿನ ವೇಳೆ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಜಿಲ್ಲೆಯ ಯಕ್ಷಗಾನ, ಸಾಹಿತ್ಯ, ಜಾನಪದ, ಪತ್ರಿಕೋದ್ಯಮ ಮೊದಲಾದ ಕ್ಷೇತ್ರದ ಬರಹಗಾರರ ಬಗ್ಗೆ ಅಧ್ಯಯನ ನಡೆಸಿ ರೂಪಿಸಿದ ಸಂಶೋಧನ ಗ್ರಂಥ ಇದಾಗಿದೆ. ಕ್ಷೇತ್ರ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಂಡಷ್ಟು ಪ್ರೇರಣೆ ಸಿಗುವ ನಿಟ್ಟಿನಲ್ಲಿ ಈ ಕೃತಿ ಲೋಕರ್ಪಣೆಯಾಗಿದೆ ಎಂದರು.
ಹಿರಿಯ ವಿದ್ವಾಂಸ ಹಾಗೂ ವಿಶ್ರಾಂತ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್ ಅವರು ಕೃತಿ ಪರಿಚಯಿಸಿ ಹೊಸಗನ್ನಡದ ಮುಂಗೊಳಿ ಕವಿ ಮುದ್ದಣನಿಂದ ತೊಡಗಿ ೨೦೨೦ರ ವರೆಗೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕನ್ನಡ ಸಾಹಿತ್ಯದ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಕೊಂಡ ಸಾವಿರಕ್ಕೂ ಅಧಿಕ ಬರಹಗಾರರ ಸಮಗ್ರ ವಿವರ ಈ ಕೋಶದಲ್ಲಿದೆ. ಸಾಹಿತ್ಯ ಸಂಶೋಧನಾಸ ಕ್ತರಿಗೆ ಈ ಕೃತಿ ಸಹಕಾರಿಯಾಗಿದೆ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕೃತಿಕಾರ ಡಾ. ಅನಿಲ್ ಕುಮಾರ್ ಶೆಟ್ಟಿ ಪುಸ್ತಕದ ಕುರಿತು ಮಾತನಾಡಿದರೆ, ಪ್ರಕಾಶಕರಾದ ಬೆಂಗಳೂರು ಬಾಲಾಜಿ ಪ್ರಕಾಶನದ ಉದಯ ಶೆಟ್ಟಿ, ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಜಗದೀಶ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಮುಂಬಯ ಬ್ಯಾಂಕ್ ಆಫ್ ಬರೋಡಾ ಹಿರಿಯ ಅಧಿಕಾರಿ ಎಂ. ರವೀಂದ್ರ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೋಶದ ಪ್ರಕಟಣೆಗೆ ಪ್ರೋತ್ಸಾಹಿಸಿದ ಹಲವು ಗಣ್ಯರನ್ನು ಅಭಿನಂದಿಸಲಾಯಿತು. ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತಕುಮಾರ್ ಸ್ವಾಗತಿಸಿದರೆ, ಪ್ರಾಧ್ಯಾಪಕ ಪ್ರೊ. ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.