ಉಡುಪಿ ನಗರದಲ್ಲಿ ಕಳಪೆ ಮಟ್ಟದ ಕಾಮಗಾರಿ: ಆರೋಪ
ಉಡುಪಿ, ಜ.24: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಮಟ್ಟದ್ದಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಲ್ಲಲ್ಲಿ ಹದಗೆಟ್ಟ ರಸ್ತೆಗಳಿಗೆ ಡಾಂಬರೀಕರಣ, ಗುಂಡಿಗಳಿದ್ದಲ್ಲಿ ತೇಪೆ ಹಾಕುವ ಕಾಮಗಾರಿ, ನೀರು ಹರಿಯುವಿಕೆಗೆ ಚರಂಡಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಈ ಕಾಮಗಾರಿಗಳು ಗುಣಮಟ್ಟದಲ್ಲಿಲ್ಲ. ಎಲ್ಲವೂ ಅವೈಜ್ಞಾನಿಕ ವಾಗಿ ನಡೆಯು ತ್ತಿದೆ ಎಂದು ಮಾಜಿ ನಗರಸಭೆ ಸದಸ್ಯ ನಿತ್ಯಾನಂದ ಒಳಕಾಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಮತ್ತು ನಗರಾಡಳಿತದ ಅಧಿಕಾರಿಗಳು ಈ ಕಾಮಗಾರಿಯನ್ನು ಪರಿಶೀಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅಮ್ಮುಂಜೆ ಪೆಟ್ರೋಲ್ ಬಂಕ್ ಬಳಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಜಲ್ಲಿಗೆ ಹಾಕಿರುವ ಸಿಮೆಂಟು ಸರಿಯಾದ ಪ್ರಮಾಣದಲ್ಲಿ ಇಲ್ಲದಿರುವುದು ಕಂಡುಬಂದಿದೆ. ಹೊಸ ಚರಂಡಿ ನಿರ್ಮಾಣ ಮಾಡಿದ ಸ್ಥಳಗಳಲ್ಲಿ ನೀರಿನ ಹರಿಯುವಿಕೆಯು ಇರುವುದಿಲ್ಲದರಿಂದ ಇದೊಂದು ವ್ಯರ್ಥ ಕಾಮಗಾರಿ ಎನಿಸಿದೆ ಎಂದು ಅವರು ದೂರಿದ್ದಾರೆ.
ಅಜ್ಜರಕಾಡುವಿನಿಂದ ಬ್ರಹ್ಮಗಿರಿವರೆಗೆ ರಸ್ತೆ ವಿಭಾಜಕಕ್ಕೆ ಬಣ್ಣ ಬಳಿಯುವ ಕಾಮಗಾರಿಯು ನಡೆಯುತ್ತಿದೆ. ವೈಜ್ಞಾನಿಕವಾಗಿ ಎರಡು ಹಂತದಲ್ಲಿ ಬಣ್ಣಗಾರಿಕೆ ನಡೆಸಿದರೆ, ದೀರ್ಘ ಸಮಯ ಬಣ್ಣದ ಬಾಳಿಕೆ ಬರುತ್ತದೆ. ಆದರೆ ಇಲ್ಲಿ ಒಂದೇ ಹಂತದಲ್ಲಿ ಬಣ್ಣ ಬಳಿದು ಕಾಮಗಾರಿಯನ್ನು ಕಳಪೆಗೊಳಿಸಲಾಗಿದೆ. ಅವೈಜ್ಞಾನಿಕ ಕಾಮಗಾರಿಯನ್ನು ಕಂಡು ಉಡುಪಿಯ ನಾಗರಿಕರು ಸಾರ್ವಜನಿಕ ಹಣ ಪೋಲಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.