ಹಡಿಲು ಭೂಮಿ ಹಸಿರಾಗಿಸಿದ ನಾಗೂರಿನ ಸುಬ್ಬಣ್ಣ ಶೆಟ್ಟಿ
ವೈಜ್ಞಾನಿಕ ಪದ್ಧತಿಯ ಸಮಗ್ರ ಕೃಷಿಯಲ್ಲಿ ರೈತನ ಸಾಧನೆ
ಕುಂದಾಪುರ: ವೈಜ್ಞಾನಿಕತೆ ಮತ್ತು ತಾಂತ್ರಿಕತೆ ಅಳವಡಿಸಿಕೊಂಡು ಕೃಷಿಯಲ್ಲಿ ಮುಂದುವರಿದರೆ ನಿರೀಕ್ಷಿತ ಫಲ ಪಡೆಯಲು ಸಾಧ್ಯ ಎಂಬುದನ್ನು ಬೈಂದೂರು ತಾಲೂಕಿನ ನಾಗೂರಿನ ಕೃಷಿಕ ಸುಬ್ಬಣ್ಣ ಶೆಟ್ಟಿ ತೋರಿಸಿಕೊಟ್ಟಿದ್ದು, ಉಳಿದವರಿಗೆ ಮಾದರಿಯಾಗಿದ್ದಾರೆ.
ಕಳೆದ ಮೂರೂವರೆ ದಶಕಗಳಿಂದ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ, ಹೈನುಗಾರಿಕೆಯಲ್ಲೂ ಯಶಸ್ಸು ಕಂಡ ಸುಬ್ಬಣ್ಣ ಶೆಟ್ಟಿಯವರಿಗೆ ಇದೀಗ 52 ವರ್ಷವಾದರೂ ಕೃಷಿಯಲ್ಲಿ ಅವರ ಜೀವನೋತ್ಸಾಹ ಯುವಕರನ್ನೇ ನಾಚಿಸುವಂತಹದ್ದು.
ಅಜ್ಜ ಹಾಗೂ ತಂದೆಯ ಕಾಲದಿಂದಲೂ ಇವರದ್ದು ಕೃಷಿ ಕಾಯಕ. ನಾಗೂರಿನ ಮೂರು ಎಕರೆ ಕೃಷಿಭೂಮಿಯಲ್ಲಿ ಶೇಂಗಾ, 50 ಸೆಂಟ್ಸ್ ಜಾಗದಲ್ಲಿ ಉದ್ದು, ಗಂಟಿಹೊಳೆಯ ಒಂದು ಎಕರೆ ಭೂಮಿಯಲ್ಲಿ ಅಡಿಕೆ, ನಾಗೂರಿನಲ್ಲಿ ತೆಂಗಿನ ತೋಟ ಮಾಡಿದ್ದಾರೆ.
ಹಡಿಲು ಭೂಮಿಯಲ್ಲೂ ಕೃಷಿ: ನಾಗೂರಿನ ಹಳಗೇರಿ ಬಳಿಯಲ್ಲಿ ಕಳೆದ 10-15 ವರ್ಷಗಳಿಂದ ಸುಮಾರು 10 ಎಕರೆ ಹಡಿಲು ಭೂಮಿಯನ್ನು
ಲೀಸ್ಗೆ ಪಡೆದು ಭತ್ತದ ಕೃಷಿ ಮಾಡಿ ಯಶಸ್ಸು ಸಾಧಿಸಿದ್ದಾರೆ. ಅಲ್ಲದೆ ಗೇಣಿ ಪಡೆದ 4 ಎಕರೆ ಭೂಮಿಯಲ್ಲಿ ಎರಡು ಹಂತದಲ್ಲಿ ಕಲ್ಲಂಗಡಿ ಬೆಳೆಯುತ್ತಾರೆ. ಮೊದಲಿಗೆ 279-ನಾಮಧಾರಿ ತಳಿಯ ಕಲ್ಲಂಗಡಿ ಬೆಳೆಯುತ್ತಿದ್ದು, ಸಾಗಾಟ ಹಾಗೂ ಗುಣಮಟ್ಟದ ದೃಷ್ಟಿಯಿಂದ ಮೆಲೋಡಿ ತಳಿಯ ಕಲ್ಲಂಗಡಿ ಬೆಳೆಯನ್ನು ಇತ್ತೀಚೆಗೆ ಕೆಲವು ವರ್ಷಗಳಿಂದ ಬೆಳೆಯುತ್ತಿದ್ದಾರೆ.
ಬೈಂದೂರು ಭಾಗದಲ್ಲಿ ಕಲ್ಲಂಗಡಿ ಬೆಳೆಗಾರರು ಕಮ್ಮಿಯಿದ್ದ ಸಂದರ್ಭ ಅಂದಿದ್ದ ಅಧಿಕಾರಿಯೊಬ್ಬರ ಮಾರ್ಗದರ್ಶನದಲ್ಲಿ ಬೆಳೆಗಾರರಿಗೆ ‘ಗುಚ್ಛ ಗ್ರಾಮ’ದಡಿ ಸಂಘ ರಿಜಿಸ್ಟ್ರಾರ್ ಮಾಡಿಸಿ ಬೆಳೆಗಾರರಿಗೆ ಪ್ರೋತ್ಸಾಹಧನ ನೀಡಿದ್ದು, ಇದನ್ನು ಬಳಸಿಕೊಂಡು ಕಲ್ಲಂಗಡಿ ಬೆಳೆಯಲ್ಲಿ ತೊಡಗಿಸಿಕೊಂಡರು.
ಹೈನುಗಾರಿಕೆಯಲ್ಲಿ ಎತ್ತಿದ ಕೈ..!
ಪೂರ್ವಜರ ಕಾಲದಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸುಬ್ಬಣ್ಣ ಶೆಟ್ಟಿಯವರು ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಳೆದ ಮೂರು ಅವಧಿಯಿಂದ ಅಧ್ಯಕ್ಷರಾಗಿದ್ದಾರೆ. ಮನೆಮನೆಗೆ ಬೆಳಗ್ಗೆ ಹಾಗೂ ಸಂಜೆ ಹಾಲು ಸಂಗ್ರಹ ವಾಹನ ಕಳಿಸಿ ಹಾಲು ಸಂಗ್ರಹಿಸುವ ವಿಧಾನ ಅಳವಡಿಸಿಕೊಳ್ಳುವ ಮೂಲಕ ಮೊದಲು 700 ಲೀಟರ್ ಇದ್ದ ಹಾಲು ಸಂಗ್ರಹ ಇದೀಗ 1,000 ಲೀಟರಿಗೆ ಏರಿಕೆಯಾಗಿದೆ. ಸುಬ್ಬಣ್ಣ ಶೆಟ್ಟಿಯವರು ಕಿರಿಮಂಜೇಶ್ವರ ಗ್ರಾಪಂ ಹಾಲಿ ಪಕ್ಷೇತರ ಸದಸ್ಯರೂ ಆಗಿದ್ದಾರೆ.
ಕಲ್ಲಂಗಡಿ ಬಂಪರ್ ಬೆಳೆ..!
ಸುಬ್ಬಣ್ಣರಿಗೆ ಕಲ್ಲಂಗಡಿ ಬೆಳೆ ಬಗ್ಗೆ ವಿಶೇಷ ಪ್ರೀತಿ. ಪ್ರತೀ ವರ್ಷ ಬೆಳೆ ಆರಂಭಿಸುವ ಸಂದರ್ಭದಿಂದ ಮೊದಲ್ಗೊಂಡು ಬೆಳೆ ಕಟಾವ್ ತನಕವೂ ತಾಂತ್ರಿಕತೆ ಬಳಸುತ್ತಾರೆ. ಸಿಂಪಡಣೆ ಯಂತ್ರ, ಕಳೆ ಯಂತ್ರದ ಜೊತೆಗೆ ಕಲ್ಲಂಗಡಿ ಗಿಡಗಳ ಬಗ್ಗೆ ಕಾಳಜಿ ವಹಿಸುತ್ತಾರೆ.
ಬೆಳೆಗೆ ಯಾವುದೇ ರಾಸಾಯನಿಕ ಬಳಸಬಾರದು ಎಂಬುದು ಇವರ ಖಚಿತ ಅಭಿಪ್ರಾಯ. ಅಂಗಡಿ ಗೊಬ್ಬರ, ರಾಸಾಯನಿಕ ಬದಲು ಮನೆ ಮದ್ದು ಕಲ್ಲಂಗಡಿ ಬೆಳೆಗೆ ಉಪಯೋಗಕಾರಿ. ಮಜ್ಜಿಗೆ, ಕಹಿಬೇವಿನ ಎಣ್ಣೆ, ತುಂಬೆ ಸೊಪ್ಪಿನ ರಸದಂತಹ ಮನೆಮದ್ದು ಕಲ್ಲಂಗಡಿ ಗಿಡದ ಕೀಟನಾಶಕವಾಗಿ ಸಹಕಾರಿ. ತರಬೇತಿಯ ಜೊತೆಗೆ ವೈಜ್ಞಾನಿಕ ಮಾದರಿ ಅಳವಡಿಸಿಕೊಂಡರೆ ಕಲ್ಲಂಗಡಿ ಲಾಭದ ಬೆಳೆ ಎನ್ನುತ್ತಾರೆ ಸುಬ್ಬಣ್ಣ ಶೆಟ್ಟಿ.
ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಮೊದಲಿನಿಂದಲೂ ಆಸಕ್ತಿಯಿತ್ತು. ಹಡಿಲು ಭೂಮಿಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ ಅಂತಹ ಭೂಮಿ ಲೀಸ್ ಪಡೆದು ಕೃಷಿ ಮಾಡುತ್ತಿರುವೆ. ಉತ್ಸಾಹ, ಇಚ್ಛಾಶಕ್ತಿಯಿಂದ ಕೃಷಿ ಮಾಡಬೇಕು ಮತ್ತು ವೈಜ್ಞಾನಿಕ ಮಾದರಿ ಅಳವಡಿಸಿಕೊಂಡರೆ ಲಾಭ ಖಂಡಿತ ಬರುತ್ತದೆ. ಯುವ ಜನಾಂಗ ಕೂಡ ಕೃಷಿ, ಹೈನುಗಾರಿಕೆ ಬಗ್ಗೆ ಹೆಚ್ಚಿನ ಒಲವು ತೋರಬೇಕಿದೆ. ಸರಕಾರ ಮತ್ತು ಇಲಾಖೆ ಕಲ್ಲಂಗಡಿ ಬೆಳೆಗೆ ಇನ್ನಷ್ಟು ಪ್ರೋತ್ಸಾಹಧನ, ಸಬ್ಸಿಡಿ ಮೊದಲಾದವುಗಳನ್ನು ನೀಡಬೇಕು.
ಸುಬ್ಬಣ್ಣ ಶೆಟ್ಟಿ, ಪ್ರಗತಿಪರ ಕೃಷಿಕ, ನಾಗೂರು
ಬಹಳ ವರ್ಷಗಳಿಂದ ಸುಬ್ಬಣ್ಣ ಶೆಟ್ಟಿ ಕೃಷಿ-ತೋಟಗಾರಿಕೆಯಲ್ಲಿ ಸಕ್ರಿಯರಾಗಿದ್ದು, ನೂತನ ಅನ್ವೇಷಣೆ, ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಕಲ್ಲಂಗಡಿ ಬೆಳೆಯಲ್ಲಿ ಅವರು ನೂತನ ವಿಧಾನಗಳನ್ನು ಪರಿಚಯಿಸಿದ್ದಾರೆ. ಕಳೆದ ವರ್ಷ ತೋಟಗಾರಿಕೆ ಇಲಾಖೆಯ ವತಿಯಿಂದ ವೀಡಿಯೊ ದಾಖಲೀಕರಣ ಮಾಡಿದ್ದು, ಇಲಾಖೆಯಿಂದ ನಡೆಯುವ ಮೇಳಗಳು ಹಾಗೂ ಕಾರ್ಯಾಗಾರಗಳಲ್ಲಿ ಇದನ್ನು ಪ್ರಸಾರ ಮಾಡಲಾಗಿತ್ತು. ಸುಬ್ಬಣ್ಣ ಶೆಟ್ಟಿಯವರ ಕೃಷಿ ಉತ್ಸಾಹ ಯುವಕರಿಗೆ ಮಾದರಿಯಾಗಿದೆ.
ನಿಧೀಶ್ ಕೆ.ಜೆ., ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಕುಂದಾಪುರ