ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ: ಸಿದ್ದಾಪುರದಲ್ಲಿ ಸಿಡಿಲು ಬಡಿಲು ಓರ್ವ ಮೃತ್ಯು
ಉಡುಪಿ: ಉಡುಪಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇಂದು ಸಂಜೆ ವೇಳೆ ಗುಡುಗು ಸಹಿತ ಧಾರಕಾರ ಮಳೆಯಾ ಗಿದ್ದು, ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಸಿಡಿಲು ಬಡಿದ ಪರಿಣಾಮ ಓರ್ವ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಸಿದ್ದಾಪುರ ಗ್ರಾಮದ ಕರಿಯಣ್ಣ ಶೆಟ್ಟಿ ಎಂಬವರ ಮಗ ಸುರೇಶ ಶೆಟ್ಟಿ(38) ಎಂದು ಗುರುತಿಸಲಾಗಿದೆ. ಹೊಸಗಂಡಿ ಹಾಗೂ ಸಿದ್ದಾಪುರ ಪರಿಸರದಲ್ಲಿ ಇಂದು ಸಂಜೆ ವೇಳೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಈ ವೇಳೆ ಸುರೇಶ್ ಶೆಟ್ಟಿ ಮನೆ ಸಮೀಪದ ಮಾವಿನ ಮರದಿಂದ ಬಿದ್ದ ಮಾವಿನ ಕಾಯಿ ಹೆಕ್ಕಲು ಹೋಗಿದ್ದರು. ಆಗ ಒಮ್ಮೇಲೆ ಸಿಡಿಲು ಬಡಿದ್ದು, ಇದರ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.
ಅದೇ ರೀತಿ ಸಂಜೆ ವೇಳೆ ಉಡುಪಿ ನಗರದಲ್ಲಿ ಗಾಳಿ ಸಹಿತ ಉತ್ತಮ ಮಳೆ ಯಾಗಿದೆ. ಇದರಿಂದ ನಗರದಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಮಳೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀರಾ ತೊಂದರೆ ಅನುಭವಿಸಿದರು. ಕೆಲವು ಕಡೆ ಗಾಳಿ ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 0.4 ಮಿ.ಮೀ., ಕುಂದಾಪುರದಲ್ಲಿ 0.1ಮಿ.ಮೀ., ಬೈಂದೂರಿನಲ್ಲಿ 0.1ಮಿ.ಮೀ., ಕಾಪುವಿನಲ್ಲಿ 0.4ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಸಿಡಿಲಿಗೆ ಜಾನುವಾರು ಬಲಿ: ಇಂದು ಸಂಜೆ ಗುಡುಗು ಸಹಿತ ಸುರಿದ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಮುದ್ದೂರು ಕರ್ಜೆಯ ನಾಗಪ್ಪಯ್ಯ ಶಾನುಭೋಗ್ ಅವರ ಮನೆಯ ಕೊಟ್ಟಿಗೆ ಸಿಡಿಲು ಬಡಿದು ಜಾನುವಾರು ಮೃತಪಟ್ಟಿದೆ. 4.30 ಸುಮಾರಿಗೆ ಕೊಟ್ಟಿಗೆಗೆ ಅಲ್ಲಿದ್ದ ಜೆರ್ಸಿ ದನಕ್ಕೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದೆ. ಪಶುವೈದ್ಯಾಧಿಕಾರಿ ಯವರು ಸ್ಥಳಕ್ಕೆ ತೆರಳಿದ್ದಾರೆ.
ಅದೇ ರೀತಿ ಹೆಗ್ಗುಂಜೆ ಗ್ರಾಮದ ಗುಲಾಬಿ ಶೆಟ್ಟಿ ಎಂಬವರ ಮನೆಯ ಮೇಲೆ ತೆಂಗಿನಮರ ಬಿದ್ದು ಅಪಾರ ನಷ್ಟವಾದ ಬಗ್ಗೆ ವರದಿ ಬಂದಿದೆ.