ವಿಶೇಷಚೇತನರ ಬದುಕಿಗೆ ಪೂರಕ ವ್ಯವಸ್ಥೆ ಕಲ್ಪಿಸಬೇಕು: ಉಡುಪಿ ಜಿಲ್ಲಾಧಿಕಾರಿ
ಸುಲಭ ಲಭ್ಯತೆಯ ವಿಶ್ವ ಜಾಗೃತಿ ದಿನ
ಉಡುಪಿ, ಮೇ16: ವಿಶೇಷಚೇತನರು ಅಂಗವೈಕಲ್ಯತೆಯನ್ನು ಮರೆತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುತ್ತಿದ್ದು, ಅವರ ಬದುಕಿಗೆ ಪೂರಕ ವಾಗುವ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಇಡೀ ಸಮಾಜ ಅವರ ಜೊತೆಗೂಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಗುರುವಾರ ಬ್ರಹ್ಮಗಿರಿಯ ರೆಡ್ಕ್ರಾಸ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಮತ್ತು ಎಪಿಡಿ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಸುಲಭ ಲಭ್ಯತೆಯ ವಿಶ್ವ ಜಾಗೃತಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಶೇಷ ಚೇತನರ ಶ್ರೇಯೋಭಿವೃದ್ಧಿಗೆ ಸರಕಾರ ಹಲವು ಕಾರ್ಯಕ್ರಮ ಗಳನ್ನು ಜಾರಿಗೊಳಿಸಿದ್ದು, ಅದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನವನ್ನು ನಡೆಸಬೇಕು. ಕಟ್ಟಡಗಳು ಅಥವಾ ಕಚೇರಿಗಳಿಗೆ ಭೇಟಿ ನೀಡುವ ವಿಕಲಚೇತ ನರಿಗೆ ಅಗತ್ಯವಿರುವ ಶೌಚಾಲಯ, ರ್ಯಾಂಪ್ ವ್ಯವಸ್ಥೆ, ವ್ಹೀಲ್ ಚೇರ್ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರಿಗೆ ಮುಕ್ತವಾಗಿ ಸಂಚಾರ ಮಾಡಲು ಅನುಕೂಲ ಮಾಡಿಕೊಡಬೇಕು ಎಂದರು.
ವಿಕಲಚೇತನರು ಎಂದು ಅವರಿಗೆ ಅನುಕಂಪ ತೋರದೇ ಆತ್ಮವಿಶ್ವಾಸದಿಂದ ಮುನ್ನುಗ್ಗಲು ಅವರಿಗೆ ದಾರಿ ಮಾಡಿಕೊಡ ಬೇಕು. ರೆಡ್ಕ್ರಾಸ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ವಿಕಲಚೇತನರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವು ಗಳನ್ನು ಗುರುತಿಸುವ ಮೂಲಕ ಮುಂದಿನ ದಿನಗಳಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಹೆಚ್ಚು ಕೆಲಸ ಮಾಡಲು ಪ್ರೇರಣೆ ನೀಡಬೇಕು ಎಂದರು.
ಸರಕಾರ ವಿಶೇಷ ಚೇತನರ ಕಲ್ಯಾಣಕ್ಕಾಗಿ ನೀಡುವ ಅನುದಾನವನ್ನು ಶೇ. 5ರಷ್ಟು ಹೆಚ್ಚಿಸಿದ್ದು, ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಕ್ರಿಯಾಯೋಜನೆ ರೂಪಿಸಿವಾಗ ಅದರಲ್ಲಿ ಶೇ.5ರಷ್ಟು ಅನುದಾನವನ್ನು ಮೀಸಲಿರಿಸಿ ವಿಕಲಚೇತನರ ಕಲ್ಯಾಣಕ್ಕಾಗಿ ಅವರಿಗೆ ಅಗತ್ಯ ವಿರುವ ವಿವಿಧ ಸವಲತ್ತು ಮತ್ತು ಸಲಕರಣೆಗಳನ್ನು ಒದಗಿಸಲಾಗುವುದು. ವಿಶೇಷ ಚೇತನರು ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರೆಡ್ಕ್ರಾಸ್ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ - 2016ರ ಸೆಕ್ಷನ್ 40-46ರ ಪ್ರಕಾರ ಎಲ್ಲಾ ಸಾರ್ವಜನಿಕ ಕಟ್ಟಡಗಳು ವಿಕಲ ಚೇತನ ವ್ಯಕ್ತಿಗಳಿಗೆ ಮುಕ್ತ ವಾತಾವರಣ ಹಾಗೂ ಎಲ್ಲಾ ಕಟ್ಟಡಗಳಲ್ಲಿ ಸುಲಭವಾಗಿ ಓಡಾಡಲು ಅಗತ್ಯವಿರುವ ಸೌಲಭ್ಯ ಗಳನ್ನು ಕಲ್ಪಿಸಬೇಕಾಗಿದೆ. ಅದರಂತೆ ಅಂಗವಿಕಲರು ಸಮಾಜದಲ್ಲಿ ಸಂಪೂರ್ಣವಾಗಿ ಹಾಗೂ ಸಕ್ರಿಯವಾಗಿ ಭಾಗವಹಿ ಸಲು ಸುಲಭ ಲಭ್ಯತೆಯ ಕುರಿತಂತೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದ್ದು, ಈ ಬಗ್ಗೆ ಸಾರ್ವಜನಿಕ ರಲ್ಲಿ ಅರಿವು ಮೂಡಿಸುವ ಸಲುವಾಗಿ ಸುಲಭ ಲಭ್ಯತೆಯ ವಿಶ್ವ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ ಭಟ್ ವಿಕಲಚೇತನ ಹಾಗು ಹಿರಿಯ ನಾಗರಿಕರ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನಾ, ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ, ಎಪಿಡಿ ಸಂಸ್ಥೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಹರೀಶ್ ಶೆಟ್ಟಿ, ಮಾಜಿ ಖಂಜಾಚಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ವಂದಿಸಿದರೆ, ರಾಘವೇಂದ್ರ ಪ್ರಭು ಕರ್ವಾಲ್ ಕಾರ್ಯಕ್ರಮ ನಿರೂಪಿಸಿದರು.