ಮಾತುಕತೆ ಕಡಿಮೆಯಾಗಿರುವುದರಿಂದ ಆತ್ಮಹತ್ಯೆ ಹೆಚ್ಚಳ: ಡಾ.ಶ್ರೀಕಾಂತ್

ಉಡುಪಿ, ಜೂ.8: ಮನುಷ್ಯ ಮನುಷ್ಯರ ಮಧ್ಯೆ ಮಾತುಕತೆ ಕಡಿಮೆ ಆಗುತ್ತಿದೆ. ಇದರಿಂದ ಆತ್ಮಹತ್ಯೆ, ಸಂಘರ್ಷಗಳು ಜಾಸ್ತಿಯಾಗುತ್ತಿವೆ. ನಮ್ಮ ಮನಸ್ಸಿನ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳ ಬೇಕು. ಅದರಲ್ಲಿ ಸಿಗುವ ಆನಂದದಿಂದ ನಮ್ಮಲ್ಲಿರುವ ಕಾಯಿಲೆ ಗಳನ್ನು ದೂರ ಮಾಡಬಹುದಾಗಿದೆ ಎಂದು ನಿವೃತ್ತ ಉಪನ್ಯಾಸಕ ಡಾ.ಶ್ರೀಕಾಂತ ರಾವ್ ಸಿದ್ಧಾಪುರ ಹೇಳಿದ್ದಾರೆ.
ಉಡುಪಿ ಸುಹಾಸಂ ವತಿಯಿಂದ ದಿನೇಶ್ ಉಪ್ಪೂರ ಅವರ ಪ್ರವಾಸ ಕಥನ ‘ಪ್ರವಾಸಾನುಭಗಳ ಪುಸ್ತಕ’ವನ್ನು ರವಿವಾರ ಉಡುಪಿ ಕಿದಿಯೂರು ಹೊಟೇಲಿನ ಅನಂತಶಯನ ಹಾಲ್‌ನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಹೊನ್ನಾವರ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ವಹಿಸಿದ್ದರು. ಲೇಖಕ ದಿನೇಶ್ ಉಪ್ಪೂರು ಉಪಸ್ಥಿತರಿದ್ದರು.
ಸುಹಾಸಂ ಕಾರ್ಯದರ್ಶಿ ಎಚ್.ಗೋಪಾಲ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಂಧ್ಯಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಶ್ರೀನಿವಾಸ ಉಪಾಧ್ಯ ವಂದಿಸಿದರು.