ಗಾಂಧೀಜಿ ‘ಅಹಿಂಸೆ’ಗೆ ಕೃಷ್ಣನ ಭಗವದ್ಗೀತೆ ಪ್ರೇರಣೆ: ಪುತ್ತಿಗೆಶ್ರೀ
ಉಡುಪಿ: ಗಾಂಧಿ ಸ್ಮತಿ, ಜನಜಾಗೃತಿ ಜಾಥಾ
ಉಡುಪಿ, ಅ.2: ಗಾಂಧೀಜಿ ಅವರಿಗೆ ಭಗವದ್ಗೀತೆ ಅತ್ಯಂತ ಪ್ರಿಯ ವಾಗಿತ್ತು. ಗಾಂಧೀಜಿ ಅವರ ‘ಅಹಿಂಸೆ’ಗೆ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆಯೇ ಪ್ರೇರಕಶಕ್ತಿಯಾಗಿತ್ತು ಎಂದು ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಹೇಳಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಉಡುಪಿ ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಉಡುಪಿ ಜಿಲ್ಲೆ ಹಾಗೂ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ 155ನೇ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಗಾಂಧಿ ಸ್ಮತಿ, ಬೃಹತ್ ಜನಜಾಗೃತಿ ಜಾಥಾ ಹಾಗೂ ಸಮಾವೇಶವನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಗತ್ತಿಗೆ ಅಹಿಂಸೆ ಮೂಲಕ ಸ್ಪೂರ್ತಿ ತುಂಬಿದ ಗಾಂಧೀಜಿಯವರಿಗೆ ಮೂಲ ಪ್ರೇರಣೆ ದೊರಕಿದ್ದೆ ಭಗವದ್ಗೀತೆಯಿಂದ. ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ಹಿಂಸೆಯನ್ನು ಬೋಧಿಸಿದ ಎಂಬ ತಪ್ಪು ಅಭಿಪ್ರಾಯ ಎಲ್ಲರಲ್ಲಿದೆ. ಆದರೆ ಕೃಷ್ಣನಿಂದಾಗಿ ಮಹಾ ಹಿಂಸೆ ತಪ್ಪಿಹೋಯಿತು. ಹೀಗಾಗಿ ಕೃಷ್ಣ ಮಹಾನ್ ಅಹಿಂಸಾವಾದಿ ಎಂದವರು ವಿವರಿಸಿದರು.
ಮಹಾಭಾರತದಲ್ಲಿ ಕೃಷ್ಣ ಅಹಿಂಸೆಯ ರಕ್ಷಣೆಗಾಗಿ ಕನಿಷ್ಠ ಹಿಂಸೆ ಎಂದು ಹೇಳಿದ್ದು. ಅದರಿಂದ ಅಲ್ಲಿ ಶಾಂತಿ ನೆಲೆಸಲು ಸಾಧ್ಯವಾಯಿತು. ಹೀಗಾಗಿ ಕೃಷ್ಣ ಬೋಧಿಸಿದ್ದು ಅಹಿಂಸೆಯನ್ನು. ಅದೇ ಗಾಂಧೀಜಿಯವರಿಗೆ ಸ್ಪೂರ್ತಿಯಾಯಿತು. ಕನಿಷ್ಠ ಹಿಂಸೆ ಎಂಬುದು ಅಹಿಂಸಾ ವ್ಯಾಖ್ಯಾನದಡಿ ಬರುತ್ತದೆ ಎಂದು ಪುತ್ತಿಗೆಶ್ರೀಗಳು ನುಡಿದರು.
ಕ್ಷೀರಾಧಾರಿತ ಅರ್ಥವ್ಯವಸ್ಥೆಗೆ ಒತ್ತು ಕೊಡಿ: ಇಂದು ಗಾಂಧಿ ತತ್ವವನ್ನು ಹೊಗಳುವವರು ಮದ್ಯಪಾನಕ್ಕೆ ಉತ್ತೇಜನ ನೀಡುತಿದ್ದಾರೆ. ಮದ್ಯಮಾರಾಟಕ್ಕೆ ಬೇಕಾದಷ್ಟು ಪರವಾನಿಗೆ ನೀಡುತಿದ್ದಾರೆ. ಗಾಂಧಿಯವರ ತತ್ವಾದರ್ಶಗಳು ನಿಮಗೆ ಮಾದರಿಯಾದರೆ ದಯವಿಟ್ಟು ಮದ್ಯಮಾರಾಟಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದು ತಾವು ಸರಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ ಅವರು ಇದು ಗಾಂಧಿ ಜಯಂತಿಗೆ ನಿಮ್ಮ ಕೊಡುಗೆಯಾಗಲಿ ಎಂದರು.
ಇಂದು ಇರುವುದು ಮದ್ಯಾಧಾರಿತ ಅರ್ಥ ವ್ಯವಸ್ಥೆ. ಇದಕ್ಕೆ ಬದಲು ಕ್ಷೀರಾಧಾರಿತ ಅರ್ಥವ್ಯವಸ್ಥೆಯನ್ನು ಸರಕಾರಗಳು ಪ್ರೋತ್ಸಾಹಿಸಬೇಕು. ಸರಕಾರಗಳು ಹಾಲಿನ ಅರ್ಥ ವ್ಯವಸ್ಥೆಗೆ ಒತ್ತು ನೀಡಬೇಕೇ ಹೊರತು ಹಾಲಾಹಲಕ್ಕಲ್ಲ. ಕೃಷ್ಣ ಹೇಳಿದ್ದು ಇದನ್ನೇ. ಅದಕ್ಕಾಗಿಯೇ ಕೃಷ್ಣ ಗೋವುಗಳ ರಕ್ಷಕನಾದ ಎಂದು ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ನುಡಿದರು.
ಧಾರ್ಮಿಕ ಚಿಂತಕ ದಾಮೋದರ ಶರ್ಮ ಬಾರಕೂರು ದಿಕ್ಸೂಚಿ ಭಾಷಣ ಮಾಡಿದರು. ಹೆಬ್ರಿಯ ದೀಪಾ ಅಜೆಕಾರು ಹಾಗೂ ಉಡುಪಿ ಚಿಟ್ಪಾಡಿಯ ಆನಂದ ದೇವಾಡಿಗ ಅವರು ಮದ್ಯವರ್ಜನ ಶಿಬಿರದ ಮೂಲಕ ಮದ್ಯದಿಂದ ವಿಮುಕ್ತರಾದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಜನಜಾಗೃತಿ ವೇದಿಕೆ ಉಡುಪಿ ಜಿಲ್ಲೆಯ ಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ, ಶ್ರೀಕ್ಷೇತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ಕುಮಾರ್ ಎಸ್.ಎಸ್., ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಸ್ವಾಮೀಜಿ, ಮುಂಬಯಿ ಉದ್ಯಮಿ ಆರ್.ಬಿ.ಹೆಬ್ಬಳ್ಳಿ, ವೇದಿಕೆಯ ಪದಾಧಿಕಾರಿಗಳಾದ ದೇವದಾಸ ಹೆಬ್ಬಾರ್, ನವೀನ್ ಅಮೀನ್, ಸತ್ಯಾನಂದ ನಾಯಕ್, ದುಗ್ಗೇಗೌಡ, ಉಮೇಶ ಶೆಟ್ಟಿ ಕುಂದಾಪುರ, ನೀರೆ ಕೃಷ್ಣ ಶೆಟ್ಟಿ, ದಯಾನಂದ, ಉದಯಕುಮಾರ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನಾಧಿಕಾರಿ ಗಮೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವೇದಿಕೆಯ ಜಿಲ್ಲಾಧ್ಯಕ್ಷ ನವೀನ್ಚಂದ್ರ ಶೆಟ್ಟಿ ರಟ್ಟಾಡಿ ವಂದಿಸಿದರು.
ಗಾಂಧೀಜಿ ದೇಶದ ‘ಆಚಾರ್ಯರು’: ಡಾ.ಹೆಗ್ಗಡೆ
ಅನಾರೋಗ್ಯದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗ ದ್ದರಿಂದ ಧರ್ಮಸ್ಥಳದಿಂದ ಆನ್ಲೈನ್ನಲ್ಲಿ ನೇರ ವೀಡಿಯೋ ಸಂದೇಶ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ, ಗಾಂಧೀಜಿ ಯವರನ್ನು ದೇಶದ ಆಚಾರ್ಯರು ಎಂದು ಸಂಬೋಧಿಸಿದರು. ಹೇಳಿದ್ದನ್ನು ಮಾಡಿ ತೋರಿಸುವವನು ಆಚಾರ್ಯ ಎನಿಸಿಕೊಳ್ಳುತ್ತಾನೆ. ಹೀಗಾಗಿ ಗಾಂಧೀಜಿ ಸಹ ಆಚಾರ್ಯರು ಎಂದರು.
ಗಾಂಧೀಜಿ ಅವರು ಸರ್ವಕಾಲಕ್ಕೂ ಮರೆಯಲಾಗದ ವ್ಯಕ್ತಿ. ದೇಶಕ್ಕೆ ಧರ್ಮ ಹಾಗೂ ಆದರ್ಶವನ್ನು ಕೊಟ್ಟವರು. ಅವರ ಸ್ಪೂರ್ತಿಯಿಂದ ಧರ್ಮಸ್ಥಳದ ಸಂಘಟನೆಗಳು ಅನೇಕ ದುಶ್ಚಟ ನಿವಾರಣಾ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿವೆ. ನಾಡಿನಾದ್ಯಂತ 1800ಕ್ಕೂ ಅಧಿಕ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿದ್ದು 1.50ಲಕ್ಷಕ್ಕೂ ಅಧಿಕ ಮಂದಿ ಇದರಿಂದ ಮದ್ಯಪಾನ ಮುಕ್ತ ರಾಗಿದ್ದಾರೆ ಎಂದರು.