ಎಂಟನೇ ತಂಡದ ಕರಾವಳಿ ಭದ್ರತಾ ತರಬೇತಿ ಸಮಾರೋಪ
ಉಡುಪಿ: ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 8ನೇಯ ತಂಡದ ತರಬೇತಿಯ ಸಮಾರೋಪ ಸಮಾರಂಭವು ಇತ್ತೀಚೆಗೆ ಮಲ್ಪೆಯ ಸಿಎಸ್ಪಿ ಕೇಂದ್ರ ಕಛೇರಿಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಪ್ರತಿಯೊಂದು ಇಲಾಖೆಯಲ್ಲಿ ಸಿಬ್ಬಂದಿಗಳು ಕಾಲಕಾಲಕ್ಕೆ ಇಲಾಖೆಯ ಆಧುನಿಕ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಹೊಂದಿಲು ತರಬೇತಿ ಮತ್ತು ಕೌಶಲ್ಯ ಅಗತ್ಯವಿದೆ. ದೇಶದ ರಕ್ಷಣೆಯಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕದ ಪಾತ್ರ ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಪಡೆದ ತರಬೇತಿಯ ಅಂಶಗಳನ್ನು ಸಾರ್ವಜನಿಕರ ಮತ್ತು ದೇಶದ ರಕ್ಷಣೆಗೆ ಉಪಯೋಗಿಸಬೇಕು ಎಂದರು.
ಅಧ್ಯಕ್ಷತೆಯನ್ನು ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಮಿಥುನ್ ಎಚ್. ಎನ್. ವಹಿಸಿದ್ದರು. ಪೊಲೀಸ್ ಉಪಾಧೀಕ್ಷಕ ಟಿ.ಎಸ್.ಸುಲ್ಫಿ, ಸಿ.ಎಸ್.ಪಿ ಕೇಂದ್ರದ ಸಹಾಯಕ ಆಡಳಿತಾಧಿಕಾರಿ ಮಂಜುಳಾ ಗೌಡ, ಪಿ.ಎಸ್.ಐ ಡಿಎನ್ ಕುಮಾರ್, ಆರ್.ಜಿ.ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಸ್ವಾಗತಿಸಿದರು. ಸುಮಾ ಕಾರ್ಯ ಕ್ರಮ ನಿರೂಪಿಸಿದರು. ಗಣಕಯಂತ್ರ ವಿಭಾಗದ ಪಿಎಸ್ಐ ಮುಕ್ತ ಬಾಯಿ ವಂದಿಸಿದರು.
ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದ ಗಂಗೊಳ್ಳಿ ಠಾಣೆಯ ಸಿಎಸ್ಪಿ ಯುವರಾಜ್, ದ್ವೀತಿಯ ಸ್ಥಾನ ಪಡೆದ ಹೊನ್ನಾವರ ಠಾಣೆಯ ಸಿಎಸ್ಪಿ ವಿನಾಯಕ ನಾಯ್ಕ್ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸುಮನ ಎಂ.ಗೌಡ ಅವರನ್ನು ಗೌರವಿಸಲಾಯಿತು.
ತರಬೇತಿಯಲ್ಲಿ ಭಾಗವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಯೋಗ, ಈಜು, ಬೋಟ್ ಪೆಟ್ರೋಲಿಂಗ್, ಬೋರ್ಡಿಂಗ್ ಆಪರೇಷನ್, ನೇವಲ್ ಬೇಸ್ ಭೇಟಿ, ಕೋಸ್ಟ್ಗಾರ್ಡ್ ಭೇಟಿ ಹಾಗೂ ಉಪನ್ಯಾಸಗಳನ್ನು ಏರ್ಪಡಿಸ ಲಾಗಿತ್ತು.