ಉಡುಪಿ: ಬಜೆ ಡ್ಯಾಂ ಬಳಿ ನಿಲಿಸುಗಲ್ಲು ಪತ್ತೆ
ಉಡುಪಿ, ನ.6: ಹಿರಿಯಡ್ಕ-ಕುಕ್ಕೆಹಳ್ಳಿ ಮಾರ್ಗದಲ್ಲಿರುವ ಸುವರ್ಣ ನದಿಗೆ ಕಟ್ಟಿರುವ ಬಜೆ ಡ್ಯಾಂ (ಕಿರು ಅಣೆಕಟ್ಟು) ಬಳಿ ಬೃಹತ್ ಶಿಲಾಯುಗಕ್ಕೆ ಸೇರುವ ನಿಲಿಸುಗಲ್ಲನ್ನು ಗಣೇಶ್ ನಾಯ್ಕ್ ಚೇರ್ಕಾಡಿ ಮತ್ತು ನಿಡ್ಲೆ ಸರಕಾರಿ ಪ್ರೌಢಶಾಲೆಯ ಅಧ್ಯಾಪಕ ಗೀತೇಶ್ ಪತ್ತೆ ಮಾಡಿದ್ದಾರೆ.
ಭೂ ಮೇಲ್ಮೈಯಿಂದ ಸುಮಾರು 6 ಅಡಿ ಎತ್ತರಯಿರುವ ಈ ಕಲ್ಲನ್ನು ಸ್ಥಳೀಯರು ಗಡಿಕಲ್ಲು ಎಂದು ಕರೆಯುತ್ತಾರೆ. ಈ ಮೊದಲು ಕ್ಷೇತ್ರ ಕಾರ್ಯವನ್ನು ಕೈಗೊಂಡಿರುವ ಯು.ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಕೆ.ಶ್ರೀಧರ್ ಭಟ್ ಬೃಹತ್ ಶಿಲಾಯುಗಕ್ಕೆ ಸೇರಿದ ಅನೇಕ ಗುಹಾ ಸಮಾಧಿಗಳನ್ನು ಮತ್ತು ಸೂಕ್ಷ್ಮ ಶಿಲಾಯುಗ, ನೂತನ ಶಿಲಾಯುಗದ ಅವಶೇಷಗಳನ್ನು ಇಲ್ಲಿ ಪತ್ತೆ ಮಾಡಿದ್ದರು.
ಆದರೆ ಪ್ರಸ್ತುತ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಇಂತಹ ಅನೇಕ ಪ್ರಾಗೈತಿಹಾಸಿಕ ಅವಶೇಷಗಳು ನಾಶವಾಗಿರುವ ಸಾಧ್ಯತೆಯಿದೆ. ಈಗ ಗುರುತಿಸಿರುವ ಈ ನಿಲಿಸುಗಲ್ಲು ಸುಮಾರು 2000 ವರ್ಷಗಳಷ್ಟು ಪ್ರಾಚೀನ ಎಂದು ಅಂದಾಜಿಸ ಬಹುದೆಂದು ಕುಕ್ಕೆಸುಬ್ರಹ್ಮಣ್ಯ ಶ್ರೀನಿಕೇತನ ವಸ್ತು ಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠದ ಉಪನಿರ್ದೇಶಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ತಿಳಿಸಿದ್ದಾರೆ.