ದೀಪಾವಳಿ ಸೌಹಾರ್ದತೆಯ ಪ್ರತೀಕ: ದತಾತಿತ್ರೇಯ ಪಾಟ್ಕರ್
ಶಿರ್ವ, ನ.7: ಪ್ರಾಚೀನ ಅಖಂಡ ಭಾರತೀಯ ಪರಂಪರೆ, ಜೀವನ ಪದ್ಧತಿ, ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಆಚರಣೆಗಳು, ನಂಬಿಕೆಗಳ ಮೇಲೆ ಬೆಳಕನ್ನು ಚೆಲ್ಲುವ ದೀಪಾವಳಿ ಹಬ್ಬವು ಭಾರತೀಯ ಸನಾತನ ಶ್ರೀಮಂತ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕ ಎಂದು ಅನಿವಾಸಿ ಭಾರತೀಯ, ಬಂಟಕಲ್ಲು ಹೇರೂರಿನ ದತಾತಿತ್ರೇಯ ಪಾಟ್ಕರ್ ಹೇಳಿದ್ದಾರೆ.
ಬಂಟಕಲ್ಲು ರೋಟರಿ ಭವನದಲ್ಲಿ ಬುಧವಾರ ಶಿರ್ವ ರೋಟರಿಯಿಂದ ಏರ್ಪಡಿಸಿದ ದೀಪಾವಳಿ ಸಂಭ್ರಮ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದುಷ್ಟ ಶಕ್ತಿಗಳ ನಿಗ್ರಹ, ಶಿಷ್ಟ ಪರಂಪರೆಯ ರಕ್ಷಣೆಗೆ ಭಗವಂತ ವಿವಿಧ ಅವತಾರಗಳನ್ನು ತಾಳಿ ಲೋಕೋದ್ಧಾರ ಮಾಡಿದ ನಂಬಿಕೆಗಳು ಅಡಗಿವೆ. ಕೃಷಿ ಸಂಸ್ಕೃತಿ ಭೂಮಿಪೂಜೆ, ಗೋಪೂಜೆ, ಅಷ್ಟಲಕ್ಷ್ಮೀ ಪೂಜೆ, ಬಲೀಂದ್ರ ಪೂಜೆ, ತುಳಸೀ ಪೂಜೆ, ಆಯುಧ ಪೂಜೆಗಳ ಹಿಂದೆ ಜೀವನ ಪದ್ಧತಿಯ ಮೌಲ್ಯಗಳು ಅಡಗಿವೆ ಎಂದರು.
ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ ಸೇನಾನಿ ಮೆಲ್ವಿನ್ ಡಿಸೋಜ ಶೂಭಾಶಂಸನೆಗೈದರು. ಸಹ ಸಂಯೋಜಕ ಡಾ.ವಿಟ್ಠಲ್ ನಾಯಕ್ ಪರಿಚಯಿಸಿದರು.
ಕಾರ್ಯಕ್ರಮ ಸಂಯೋಜಕ ಬಿ.ಪುಂಡಲೀಕ ಮರಾಠೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕಾರ್ಯ ದರ್ಶಿ ಈವನ್ ಜೂಡ್ ಡಿಸೋಜ ವಂದಿಸಿದರು. ವಿಷ್ಣುಮೂರ್ತಿ ಸರಳಾಯ ನಿರೂಪಿಸಿದರು. ಮೈಕಲ್ ಮತಾಯಸ್ ಸಹಕರಿಸಿದರು. ಸಾಮೂಹಿಕವಾಗಿ ದೀಪ ಪ್ರಜ್ವಲನ, ರಘುಪತಿ ಐತಾಳ್ ನೇತೃತ್ವದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.