ಭತ್ತ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ ಪಡಿಸಲು ಆಗ್ರಹಿಸಿ ಧರಣಿ
ಉಡುಪಿ: ಭತ್ತ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ ಹಾಗೂ ಭತ್ತ ಖರೀದಿ ಕೇಂದ್ರ ಶೀಘ್ರ ತೆರೆಯುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಉಡುಪಿ ಸಂಚಾಲನಾ ಸಮಿತಿ ವತಿಯಿಂದ ನೇತೃತ್ವದಲ್ಲಿ ರೈತರ ಹಕ್ಕೋತ್ತಾಯದ ಧರಣಿಯನ್ನು ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿತ್ತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಸಂಚಾಲಕ ಚಂದ್ರಶೇಖರ್ ವಿ., ಉಡುಪಿ ಜಿಲ್ಲೆಯಾದ್ಯಂತ ಭತ್ತದ ಬೆಳೆ ಕಟಾವಿಗೆ ಸಿದ್ಧಗೊಂಡಿದ್ದು, ಎಂದಿನಂತೆ ಭತ್ತ ಕಟಾವು ಯಂತ್ರಗಳು ಪ್ರತಿ ಗ್ರಾಮಕ್ಕೆ ಬರುತ್ತಿವೆ. ಯಂತ್ರಗಳು ಪ್ರತಿ ಗಂಟೆಯೊಂದಕ್ಕೆ ೨೪೦೦ರೂ. ಅಧಿಕ ದರವನ್ನು ನಿಗದಿ ಮಾಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ ಎಂದರು.
ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ದರಗಳನ್ನು ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ಬಿಕ್ಕಟ್ಟಿನಲ್ಲಿರುವ ಭತ್ತದ ಕೃಷಿಗೆ ಈ ದರ ಮಾರಕವಾಗಿದೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ದರ ನಿಗದಿಪಡಿಸಬೇಕು. ಹೆಚ್ಚಿನ ದರ ವಸೂಲಿ ಮಾಡು ವವರ ವಿರುದ್ಧ ಕಠಿಣಾ ಕ್ರಮ ಕೈಗೊಳ್ಳಬೇಕು. ಅದರೊಂದಿಗೆ ಕೃಷಿ ಕೇಂದ್ರಗಳ ಮೂಲಕ ಭತ್ತ ಕಟಾವು ಯಂತ್ರವನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಭತ್ತದ ಬೆಳೆ ಕೊಯ್ಲು ಅಕ್ಟೋಬರ್ ಅಂತ್ಯದಲ್ಲೇ ಆರಂಭಗೊಂಡಿದ್ದು, ಇನ್ನೂ ಭತ್ತ ಖರೀದಿ ಕೇಂದ್ರ ತೆರಿದಿಲ್ಲ. ಇದರಿಂದಾಗಿ ರೈತರು ಅನಿವಾರ್ಯವಾಗಿ ಖಾಸಗಿ ಭತ್ತದ ಮಿಲ್ಗೆ ಭತ್ತ ಮಾರಾಟ ಮಾಡಬೇಕಾಗಿದೆ. ಇದರಿಂದ ರೈತರು ಮಿಲ್ ಮಾಲಕರು ನಿಗದಿ ಮಾಡಿದ ದರಕ್ಕೆ ಭತ್ತ ಮಾರಾಟ ಮಾಡಬೇಕಾಗಿದೆ. ಹೀಗಾಗಿ ರೈತರು ಲಾಭದಾಯಕ ಬೆಲೆಯಿಂದ ವಂಚಿತರಾಗುತ್ತಿದ್ದಾರೆ. ಆದುದರಿಂದ ಜಿಲ್ಲಾಡಳಿತ ತಕ್ಷಣವೇ ಸೂಕ್ತ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಅವರು ಒತ್ತಾಯಿಸಿದರು.
ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ಸುರೇಶ್ ಕಲ್ಲಾಗರ್, ಅನಿಲ್ ಬಾರಕೂರು, ಎಚ್.ನರಸಿಂಹ, ವೆಂಕಟೇಶ್ ಕೋಣಿ, ಶಶಿಧರ ಗೊಲ್ಲ, ಬಲ್ಕೀಸ್ ಕುಂದಾಪುರ, ಬಾರಕೂರು ಹೈನು ಉತ್ಪಾದಕರ ಸಂಘದ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ವಂಸತ ಮೊದಲಾದ ವರು ಉಪಸ್ಥಿತರಿದ್ದರು.