ಕುಂದಾಪುರ - ಸಿದ್ಧಾಪುರ ರಸ್ತೆ ಮೇಲ್ದರ್ಜೆಗೇರಿಸಲು ಸಚಿವ ಜಾರಕಿಹೊಳಿಗೆ ಮಂಜುನಾಥ ಭಂಡಾರಿ ಮನವಿ
ಸಾಂದರ್ಭಿಕ ಚಿತ್ರ
ಉಡುಪಿ: ಕುಂದಾಪುರ-ಸಿದ್ಧಾಪುರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ, ರಸ್ತೆ ಅಗಲೀಕ ರಣ ಕಾಮಗಾರಿ ಯನ್ನು ಪ್ರಾರಂಭಿಸುವಂತೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ರಾಜ್ಯ ಲೋಕೋ ಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಲೋಕೋಪಯೋಗಿ ಇಲಾಖಾ ಸಚಿವರಿಗೆ ಪತ್ರವೊಂದನ್ನು ಬರೆದಿರುವ ಭಂಡಾರಿ, ಬಸ್ರೂರು ಮೂರುಕೈ ಯಿಂದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಕುಂದಾಪುರ- ಸಿದ್ಧಾಪುರ ರಾಜ್ಯ ಹೆದ್ದಾರಿ ಅಗಲೀಕರಣ ಬೇಡಿಕೆ ಬಹುಕಾಲದಿಂದ ನೆನೆಗುದಿಗೆ ಬಿದ್ದಿದೆ ಎಂದು ಹೇಳಿದ್ದಾರೆ.
ಈ ಮಾರ್ಗದಲ್ಲಿ ಸಿದ್ಧಾಪುರ, ಅಂಪಾರು ಪೇಟೆ ಜಂಕ್ಷನ್ನ ಅಗಲೀರಣ ಹೊರತು ಪಡಿಸಿ ರಾಜ್ಯ ಹೆದ್ದಾರಿ ಇಂದಿಗೂ ಗತ ಕಾಲದಲ್ಲೇ ಮುಂದುವರಿದಿದೆ. ಚತುಷ್ಪಥ ನಿರ್ಮಾಣದ ವೇಳೆ ಕುಂದಾಪುರವನ್ನು ಸಂಧಿಸುವ ಈ ರಾಜ್ಯ ಹೆದ್ದಾರಿಯನ್ನು ಅಗಲೀಕರಣಗೊಳಿಸುವಂತೆ ನಾಗರಿಕ ಹೋರಾಟ ಸಮಿತಿ ಮಾಡಿಕೊಂಡ ಮನವಿಗೆ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 66ನ್ನು ಸಂಧಿಸುವ ಬಸ್ರೂರು ಮೂರುಕೈ ಯಿಂದ ಅಂಪಾರುವರೆಗಿನ ಹೆದ್ದಾರಿ ಅಗಲ ಕಿರಿದಾಗಿದ್ದು, ಪೇಟೆಗಳ ಅಭಿವೃದ್ಧಿ ಹಾಗೂ ವಾಹನ ದಟ್ಟಣೆಗಳ ಹಿನ್ನೆಲೆಯಲ್ಲಿ ಸಂಚಾರ ಅಪಾಯಕಾರಿಯಾಗಿ ಪರಿಣಮಿ ಸಿದೆ. ಘನ ವಾಹನಗಳು ತೀರಾ ಎಚ್ಚರದಿಂದ ಸಂಚರಿಸಬೇಕಾದ ಅನಿವಾರ್ಯತೆ ಇದೆ ಎಂದು ಭಂಡಾರಿ ವಿವರಿಸಿದ್ದಾರೆ.
ಹೆಮ್ಮಾಡಿ-ಕೊಲ್ಲೂರು ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಾಗಿ ಅಗಲೀಕರಣಗೊಂಡಿದೆ. ಕೋಟೇಶ್ವರ- ಹಾಲಾಡಿ-ವಿರಾಜಪೇಟೆ ಹೆದ್ದಾರಿಯೂ ಅಗಲೀಕರಣಗೊಂಡಿದೆ. ಆದರೆ ಕುಂದಾಪುರ- ಸಿದ್ಧಾಪುರ ಹೆದ್ದಾರಿ ಮಾತ್ರ ಈಗಲೂ ಹಿಂದಿನಂತೆಯೇ ಉಳಿದುಕೊಂಡಿದೆ. ಶಿವಮೊಗ್ಗ- ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದ್ದರೂ ಈವರೆಗೆ ಅಭಿವೃದ್ಧಿ ಕಂಡಿಲ್ಲ ಎಂದವರು ಹೇಳಿದ್ದಾರೆ.
ಆದ್ದರಿಂದ ಕುಂದಾಪುರ-ಸಿದ್ಧಾಪುರ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ಕಾಮಗಾರಿ ಪ್ರಾರಂಭಿಸುವಂತೆ ಅವರು ಸಚಿವ ಜಾರಕಿಹೊಳಿ ಅವರಿಗೆ ಮನವಿ ಮಾಡಿದ್ದಾರೆ.