ಮಹಾಲಕ್ಷ್ಮೀ ಅವ್ಯವಹಾರ ಗಮನ ಬೇರೆಡೆ ಸೆಳೆಯಲು ಶಾಸಕ ಯಶ್ಪಾಲ್ ಸುವರ್ಣರಿಂದ ವಕ್ಫ್ ವಿವಾದ: ಶರ್ಫುದ್ದಿನ್ ಶೇಖ್
ಯಶ್ಪಾಲ್ ಸುವರ್ಣ
ಉಡುಪಿ:ಶಾಸಕ ಯಶ್ಪಾಲ್ ಸುವರ್ಣ ಶಾಸಕ ಸ್ಥಾನದ ಘನತೆಯನ್ನು ಮರೆತು ವರ್ತಿಸುತ್ತಿದ್ದಾರೆ. ಈ ವ್ಯಕ್ತಿ ಶಾಸಕರೋ ಅಥವಾ ಪುಡಿ ರೌಡಿಯೋ ಎಂಬ ಅನುಮಾನ ಮೂಡುತ್ತಿದೆ. ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಅವ್ಯವಹಾರದ ಆರೋಪ ವ್ಯಾಪಕವಾಗಿ ಇವರ ಮೇಲಿದೆ. ಈ ಪ್ರಕರಣದಿಂದ ಸಾರ್ವಜನಿಕರ ಗಮನವನ್ನು ಬೇರೆ ಕಡೆ ಸೆಳೆಯಲು ವಕ್ಫ್ ನೆಪವಾಗಿಸಿಕೊಂಡು ಶಾಸಕ ಸ್ಥಾನದ ಘನತೆಯನ್ನು ಮರೆತು ಮುಸ್ಲಿಂ ಸಮುದಾಯದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಶರ್ಫುದ್ದಿನ್ ಶೇಖ್ ಮಜೂರ್ ಟೀಕಿಸಿದ್ದಾರೆ.
ವಕ್ಫ್ ಸಂಬಂಧವಾಗಿ ಅತಿಹೆಚ್ಚು ನೋಟಿಸ್ಗಳನ್ನು ರೈತರಿಗೆ ನೀಡಿದ್ದು ಇವರ ಹಿಂದಿನ ಸರಕಾರ. 2014ರಲ್ಲಿ ಬಿಜೆಪಿಯವರ ಕೇಂದ್ರ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ವಕ್ಫ್ ಭೂಮಿಯನ್ನು ತೆರವುಗೊಳಿಸುತ್ತೇವೆ ಎಂಬ ವಾಗ್ದಾನವಿದೆ. ಈಗ ಕಾಂಗ್ರೆಸ್ ಸರಕಾರದ ವಿರುದ್ಧ ವಕ್ಫ್ ನೋಟಿಸುಗಳನ್ನೇ ನೆಪವಾಗಿಸಿಕೊಂಡು ಡಿಸಿ ಕಚೇರಿಗೆ ನುಗ್ಗುವುದು, ರಸ್ತೆಯ ಮೇಲೆ ಪ್ರತಿಭಟನೆ ಮಾಡುವ ನಾಟಕಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಜನತೆಗೆ ಈ ನಾಟಕದ ಹಿಂದಿನ ಉದ್ದೇಶ ಮತ್ತು ಹುನ್ನಾರ ಅರ್ಥವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.