ಉಡುಪಿ| ಗ್ರಾಪಂ ಉಪ ಚುನಾವಣೆ: ಮದ್ಯ ಮಾರಾಟ ನಿಷೇದ
ಉಡುಪಿ, ನ.8: ಜಿಲ್ಲೆಯ ಉಡುಪಿ ತಾಲೂಕಿನ ಬೊಮ್ಮಾರಬೆಟ್ಟು ಹಾಗೂ 13-ಕೊಡಿಬೆಟ್ಟು, ಕುಂದಾಪುರ ತಾಲೂಕಿನ 35-ಅಮಾಸೆಬೈಲು, ಬ್ರಹ್ಮಾವರ ತಾಲೂಕಿನ ಕೋಟ ಹಾಗೂ ಕಾರ್ಕಳ ತಾಲೂಕಿನ ಈದು, ನಲ್ಲೂರು, ನಿಟ್ಟೆ, ನೀರೆ, 5-ಕೆರ್ವಾಶೆ ಹಾಗೂ ಕಡ್ತಲ ಗ್ರಾಪಂಗಳ ಉಪಚುನಾವಣೆಗೆ ಸಂಬಂಧಿಸಿದಂತೆ ನ.23ರಂದು ಮತದಾನ ನಡೆಯಲಿದೆ.
ಈ ಸಂದರ್ಭ ಶಾಂತಿಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯಸಮ್ಮತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ಕರ್ನಾಟಕ ಅಬಕಾರಿ ಕಾಯ್ದೆ ಸಾಮಾನ್ಯ ನಿಯಮಾವಳಿ 1967 ಕಲಂ 10(ಬಿ)ರಂತೆ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ ಅಧಿನಿಯಮ 1993 ಪ್ರಕರಣ 308 ಎಸಿ ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾುಸಿ, ನ.21ರ ಸಂಜೆ 5 ಗಂಟೆ ಯಿಂದ ನ.23ರ ಸಂಜೆ 5 ಗಂಟೆವರೆಗೆ ಈ ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದಂಗಡಿ, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ ತಯಾರಿಕಾ ಡಿಸ್ಟಿಲರಿಗಳನ್ನು, ಸ್ಟಾರ್ ಹೋಟೆಲ್ಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚಲು ಆದೇಶಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ವೇತನ ಸಹಿತ ರಜೆ: ನ.23ರಂದು ಮತದಾನ ನಡೆಯಲಿರುವ ಎಲ್ಲಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಎಲ್ಲಾ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಆ ದಿನ ಎಲ್ಲಾ ಸಂಘ-ಸಂಸ್ಥೆ, ವ್ಯಾಪಾರ, ವಾಣಿಜ್ಯ ಉದ್ದಿಮೆಗಳಿಗೆ, ಕೈಗಾರಿಕಾ ಘಟಕಗಳಿಗೆ ಹಾಗೂ ಸಣ್ಣ ಮತ್ತು ದೊಡ್ಡ ಘಟಕಗಳಲ್ಲಿ ಸೇವೆ ಸಲ್ಲಿಸುವ ಕಾರ್ಮಿಕ ಸಿಬ್ಬಂದಿಗಳಿಗೆ ವೇತನ ಸಹಿತ ರಜೆಯನ್ನು ಘೋಷಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.