ಶಾಲೆಗಳಲ್ಲಿ ದಾಸ, ಶರಣ ಸಾಹಿತ್ಯದ ಪಠ್ಯ ಅಳವಡಿಸಿ: ಪುತ್ತಿಗೆಶ್ರೀ
3 ದಿನಗಳ ಹರಿದಾಸ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಉಡುಪಿ, ನ.9: ಶಾಲಾ ಕಾಲೇಜುಗಳಲ್ಲಿ ಉದ್ಯೋಗ ಗಳಿಕೆಯ ಪಾಠದ ಜೊತೆಜೊತೆಗೆ ಜೀವನ ಸಾರ್ಥಕ್ಯಕ್ಕೆ ಪೂರಕವಾದ ದಾಸ, ವ್ಯಾಸ, ಶರಣ ಸಾಹಿತ್ಯವನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ಪರಿಚಯಿಸುವ ಕೆಲಸವಾಗ ಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಸರಕಾರವನ್ನು ಒತ್ತಾಯಿಸಿದ್ದಾರೆ.
ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣಮಠ, ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನ ಉಡುಪಿ ಹಾಗೂ ಬೆಂಗಳೂರಿನ ಶ್ರೀನಿವಾಸ ಉತ್ಸವ ಬಳಗದಿಂದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ಶ್ರೀವಿಜಯದಾಸರ ಆರಾಧನಾ ಮಹೋತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ಸಮಾಜದ ಸುಸ್ಥಿತಿಗೆ ಸೇವಾ ಮನೋಭಾವ ಅತಿಮುಖ್ಯ. ಭಗವಂತನ ದಾಸ್ಯ ಸ್ವೀಕರಿಸಿ ವಿನಯದ ಜೀವನ ನಡೆಸುವುದರಿಂದ ಸಮಾಜ, ದೇಶದ ಉನ್ನತಿ ಸಾಧ್ಯ. ದೇಶ, ದೇವರು, ಜನರ ಸೇವೆಗೆ ನಮ್ಮ ಬದುಕು ಮುಡುಪಾಗಿ ಡಬೇಕು. ನೈತಿಕತೆಯ ಮೂಲ ಭಾವವೇ ಸೇವಾ ಭಾವ ಎಂದು ಅವರು ಹೇಳಿದರು.
ಭಾರತೀಯತೆಗೆ ತದ್ವಿರುದ್ಧವಾಗಿ ಅಮೆರಿಕದಲ್ಲಿ ಹೆತ್ತವರಿಗೆ ಬಗ್ಗ ಬೇಡ ಎನ್ನುವ ಬೋಧನೆ ಮಾಡಲಾಗುತ್ತದೆ. ವಿನಯ, ಸೇವೆಗೆ ಪ್ರಾಶಸ್ತ್ಯವಿರುವ ಸಮಾಜ, ದೇಶ ಪ್ರಗತಿ ಸಾಧಿಸುತ್ತದೆ. ಇದಕ್ಕೆ ಜಪಾನ್ ದೇಶವೇ ಅತ್ಯುತ್ತಮ ಉದಾಹರಣೆ ಎಂದು ಶ್ರೀಸುಗುಣೇಂದ್ರತೀರ್ಥರು ವಿವರಿಸಿದರು.
ದಾಸ, ವ್ಯಾಸ, ಶರಣ ಸಾಹಿತ್ಯ ಜನರ ಮೌಲಿಕ ಜೀವನ ಮಟ್ಟದೊಂದಿಗೆ ನೈತಿಕತೆಯನ್ನು ಉನ್ನತೀಕರಿಸುತ್ತದೆ. ಶಾಲೆಗಳಲ್ಲಿ ಪಾಠದ ಜೊತೆಗೆ ದಾಸ, ವ್ಯಾಸ, ಶರಣ ಸಾಹಿತ್ಯವನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಅವರು ಸಲಹೆ ನೀಡಿದರು.
ಬೆಂಗಳೂರಿನ ಬೇಲಿಮಠದ ಶ್ರೀಶಿವಾನುಭವಚರಮೂರ್ತಿ ಶಿವರುದ್ರ ಸ್ವಾಮೀಜಿ ದಿಕ್ಸೂಚಿ ಭಾಷಣ ಮಾಡಿ, ಸಂತರು, ದಾಸರಿಂದಾಗಿ ಹಿಂದೂ ಸಂಸ್ಕೃತಿ ಉಳಿದುಕೊಂಡಿದೆ. ದಾಸ ಸಾಹಿತ್ಯ ಮತಾಂತರ ತಡೆಯಲು ಪ್ರಭಾವ ಬೀರಿದೆ. ಸಂಸ್ಕೃತಿ ಉಳಿಸಲು ಹಿರಿಯರು ಹಾಕಿಕೊಟ್ಟ ಮೇಲ್ಪಂಕ್ತಿ ಭವಿಷ್ಯದ ಯುವಪೀಳಿಗೆಗೆ ಮಾದರಿ, ಪ್ರೇರಣೆಯಾಗಬೇಕು ಎಂದರು.
ಬೆಂಗಳೂರಿನ ಹರಿದಾಸವಾಹಿನಿ ಮಾಸಪತ್ರಿಕೆ ಸಂಪಾದಕ ಹಾಗೂ ದಾಸಸಾಹಿತ್ಯ ಸಂಶೋಧಕ ಡಾ.ಎ.ಬಿ. ಶ್ಯಾಮಾ ಚಾರ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಸೇಡಂನ ದಾಸಧೇನು ಟ್ರಸ್ಟ್ನ ಅಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಆಶಯ ಭಾಷಣ ಮಾಡಿದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು, ನಾಗಸಂದ್ರ ಜಂಗಮಮಠದ ಶ್ರೀಸಿದ್ಧಲಿಂಗೇಶ್ವರ ಸ್ವಾಮೀಜಿ, ಪಂಡಿತ್ ಮುದ್ದು ಮೋಹನ್ ಉಪಸ್ಥಿತರಿದ್ದರು. ವಿಜಯ ವಿಠಲ ಹಾಗೂ ವಿಜಯ ಚಿಂತನಾ ಮೋದ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಉಡುಪಿ ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನದ ಡಾ.ಬಿ. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರೆ, ಡಾ. ಗುರುರಾಜ ಪು. ಶೆಟ್ಟಿಹಳ್ಳಿ ಸ್ವಾಗತಿಸಿದರು.ವಾದಿರಾಜ ಆಚಾರ್ಯ ಪ್ರಾಸ್ತಾವಿಕ ಮಾತಾಡಿದರು.