ನಕಲಿ ಪರಶುರಾಮ ಮೂರ್ತಿ ಪ್ರಕರಣ| ಶಾಸಕರು, ಅಧಿಕಾರಿಗಳು ಶಾಮೀಲು: ಸಮಗ್ರ ತನಿಖೆಗೆ ಆಗ್ರಹ
ಉಡುಪಿ: ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಶಿಲ್ಪಿ ಕೃಷ್ಣ ನಾಯ್ಕ್ನನ್ನು ಬಂಧಿಸಿದ್ದಾರೆ. ಇದರ ಹಿಂದೆ ಕೇವಲ ಕೃಷ್ಣ ನಾಯ್ಕ್ ಮಾತ್ರ ಅಲ್ಲ, ತುಂಬಾ ಜನ ಇದ್ದಾರೆ. ಅಧಿಕಾರಿಗಳು, ಶಾಸಕರು ಶಾಮೀಲಾಗಿರುವ ಸಾಧ್ಯತೆ ಕೂಡ ಇದೆ. ಆದುದರಿಂದ ತನಿಖೆಯನ್ನು ತೀವ್ರಗೊಳಿಸಿ ಇದರ ಹಿಂದೆ ಇವರನ್ನು ಪತ್ತೆ ಹಚ್ಚಿ, ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಕೂಡ ಶಾಮೀಲಾಗಿದ್ದಾರೆ. ಅದೇ ರೀತಿ ಇತರ ಅಧಿಕಾರಿಗಳು ಹಾಗೂ ಶಾಸಕರು ಕೂಡ ಇದ್ದಾರೆ. ಆದರೆ ಪ್ರಸ್ತುತ ಇದರಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಈ ಪ್ರಕರಣದ ಸಿಓಡಿ ತನಿಖೆಗೆ ತಡೆಯಾಜ್ಞೆ ತರಲಾಗಿದ್ದು, ಮುಂದೆ ಅದನ್ನು ಕೂಡ ತೆರವುಗೊಳಿಸಿ ತನಿಖೆ ಮಾಡಿಸಬೇಕು. ಆ ಮೂಲಕ ಪ್ರಕರಣದ ಸತ್ಯಾಂಶ ಹೊರಗೆ ತರಬೇಕು ಎಂದರು.
ಹಣ ಎಲ್ಲಿ ಹೋಗಿದೆ?: ಪರಶುರಾಮನ ಕಂಚಿನ ಮೂರ್ತಿ ನಿರ್ಮಾಣದ ಕಾಮಗಾರಿಗೆ 2022ರ ಡಿಸೆಂಬರ್ನಲ್ಲಿ ಟೆಂಡರ್ ಆಗಿದ್ದು, ಆದರೆ ಸೆಪ್ಟೆಂಬರ್ ಮತ್ತು ನವೆಂಬರ್ ನಲ್ಲಿಯೇ ಕೃಷ್ಣ ನಾಯ್ಕ್ ಬ್ಯಾಂಕ್ ಖಾತೆಗೆ ಉಡುಪಿ ನಿರ್ಮಿತಿ ಕೇಂದ್ರದಿಂದ ಸರಕಾರದ 1.25 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಅದರ ಸಂಪೂರ್ಣ ಬಳಕೆ ಮೂಲವನ್ನು ಪತ್ತೆಹಚ್ಚಬೇಕು. ಆ ಹಣದಲ್ಲಿ ಮೂರ್ತಿಗೆ ಕಂಚು ಖರೀದಿ ಮಾಡಿಲ್ಲ. ಮಾಡಿದ್ದರೆ ಬಿಲ್ ತೋರಿಸಲಿ ಎಂದು ಸವಾಲು ಹಾಕಿದರು.
2024 ಜು.4ರಂದು ಕೃಷ್ಣ ನಾಯ್ಕ್ ರವರ ಬ್ಯಾಂಕ್ ಖಾತೆಯ ವಿವರವನ್ನು ಮತ್ತು ಆ.3ರಂದು 1 ಲಕ್ಷಕ್ಕೂ ಮೇಲ್ಪಟ್ಟ ಠೇವಣಿ ಮತ್ತು ಹಿಂಪಡೆದ ವಿವರವನ್ನು ಬ್ಯಾಂಕ್ ಆಫ್ ಬರೋಡ ಬೆಂಗಳೂರು ಶಾಖೆಯವರು ಕಾರ್ಕಳ ಪೊಲೀಸರಿಗೆ ನೀಡಿದ್ದಾರೆ. ಆ ಹಣ ಎಲ್ಲಿ ಹೋಗಿದೆ. ಯಾರ ಯಾರ ಖಾತೆಗಳಿಗೆ ಜಮೆ ಯಾಗಿದೆ ಎಂಬುದು ಬಹಿರಂಗ ಆಗಬೇಕು. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭೋದ್ ರಾವ್, ಕಾರ್ಯದರ್ಸಿ ವಿವೇಕ್ ಶೆಣೈ, ಪುರಸಭೆ ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ತಾಪಂ ಮಾಜಿ ಸದಸ್ಯ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.
‘ಮೂರ್ತಿಯ ಮೇಲ್ಭಾಗ ಪತ್ತೆ ಹಚ್ಚಿ’
ನಕಲಿ ಪರಶುರಾಮ ಮೂರ್ತಿಯ ನಿರ್ಮಿಸಿ ಉಡುಪಿ ಮತ್ತು ದಕ್ಷಿಣ ಕನ್ನಡ ಉಭಯ ಜಿಲ್ಲೆಯ ಜನರ ಧಾರ್ಮಿಕ ಭಾವನೆಗೆ ದಕ್ಕೆ ತರಲಾಗಿದೆ. ಈ ಹಿಂದೆ ೩೩ ಅಡಿ ಎತ್ತರದ ಪರಶುರಾಮ ಮೂರ್ತಿಯ ಮೇಲ್ಭಾಗವನ್ನು ರಾತ್ರೋರಾತ್ರಿ ತೆಗೆದು ಕೊಂಡು ಹೋಗಿ ಕೃಷ್ಣ ನಾಯ್ಕ್ ಮತ್ತು ಉಡುಪಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ನಾಶಮಾಡಿದ್ದಾರೆ. ಆ ಭಾಗವನ್ನು ಅವರು ಸುಟ್ಟು ಹಾಕಿರಬೇಕು, ಇಲ್ಲ ಹೂತಿರಬೇಕು ಅಥವಾ ಗೋದಾಮಿನಲ್ಲಿ ತೆಗೆದಿರಿಸಿರಬೇಕು ಎಂದು ಉದಯ ಕುಮಾರ್ ಶೆಟ್ಟಿ ಮುನಿಯಾಲು ಆರೋಪಿಸಿದರು.
ಉಡುಪಿಯ ಪೊಲೀಸರು ಆ ಭಾಗವನ್ನು ಪತ್ತೆ ಹಚ್ಚಬೇಕು. ಆ ಮೂಲಕ ಸುನೀಲ್ ಕುಮಾರ್ ಧರ್ಮರಕ್ಷಣೆ ಹೆಸರಿನಲ್ಲಿ ಮಾಡಿರುವ ವಂಚನೆಯನ್ನು ಜನರ ಮುಂದೆ ಬಯಲು ಮಾಡಬೇಕು. ನಕಲಿ ಮೂರ್ತಿ ರಾಜಕೀಯ ಮಾಡಿರುವುದು ದೊಡ್ಡ ಅಪರಾಧ. ಶಾಸಕರು ಈ ಬಗ್ಗೆ ಜನರ ಮುಂದೆ ಸ್ಪಷ್ಟನೆ ನೀಡಬೇಕು ಎಂದು ಅವರು ಹೇಳಿದರು.
‘ಕಲಾವಿದ ಕೃಷ್ಣ ನಾಯ್ಕ್ ಬಗ್ಗೆ ನಮಗೆ ಯಾವುದೇ ವೈಯಕ್ತಿಕ ಧ್ವೇಷ ಇಲ್ಲ. ಆದರೆ ಈ ಪ್ರಕರಣದಲ್ಲಿ ವಿಪರ್ಯಾಸ ಅಂದರೆ ಯಾರು ಮನೆಯಲ್ಲಿ ಇರಬೇಕಿತ್ತೊ ಅವರು ವಿಧಾನಸೌಧದಲ್ಲಿದ್ದಾರೆ. ಯಾರು ಕಲಾವಿದನಾಗಿ ಮೂರ್ತಿ ಮಾಡಬೇಕಾ ಗಿತ್ತೋ ಅವರು ಜೈಲಿನಲ್ಲಿದ್ದಾರೆ. ಯಾರು ಇಂಜಿನಿ ಯರ್ ಆಗಿ ಕೆಲಸ ಮಾಡಬೇಕಾಗಿತ್ತೋ ಅವರು ಅಮಾನತು ಆಗಿದ್ದಾರೆ’
-ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡ