ನ್ಯಾಯಾಲಯದ ಆದೇಶ ಪ್ರತಿ ನೋಡದೇ ಪ್ರತಿಕ್ರಿಯೆ ನೀಡಲಾರೆ: ಎನ್.ಸುರೇಂದ್ರ ಅಡಿಗ
ಸುರೇಂದ್ರ ಅಡಿಗ - ಡಾ.ಪಿ.ವಿ.ಭಂಡಾರಿ
ಉಡುಪಿ: ರಾಜ್ಯ ಉಚ್ಛ ನ್ಯಾಯಾಲಯ ನೀಡಿದೆ ಎನ್ನಲಾದ ತಡೆಯಾಜ್ಞೆ ಆದೇಶದ ಪ್ರತಿ ಇನ್ನೂ ನನಗೆ ಸಿಕ್ಕಿಲ್ಲ. ಅದನ್ನು ನೋಡಿ, ಓದಿದ ಬಳಿಕವೇ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯ. ಏನೂ ಗೊತ್ತಿಲ್ಲದೇ ನಾನು ಯಾವುದೇ ಹೇಳಿಕೆಯನ್ನು ನೀಡವುದಿಲ್ಲ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.
ಕಸಾಪದ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್. ಪಿ. ಅವರನ್ನು ಹುದ್ದೆಯಿಂದ ಹಠಾತ್ತನೇ ಪದಚ್ಯುತ ಗೊಳಿಸಿದ ಕಸಾಪ ಜಿಲ್ಲಾಧ್ಯಕ್ಷರ ಆದೇಶಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಕುರಿತಂತೆ ಅಡಿಗರನ್ನು ಪ್ರಶ್ನಿಸಿದಾಗ, ಅವರು ಈ ಪ್ರತಿಕ್ರಿಯೆ ನೀಡಿದರು.
ಪ್ರಕರಣ ಈಗ ಕೋರ್ಟಿನ ಮೆಟ್ಟಿಲೇರಿರುವುದರಿಂದ ಈ ಸಂದರ್ಭ ನಾನು ಏನೋ ಹೇಳುವುದು ಸಮಂಜಸವಾಗಲಾರದು. ನ್ಯಾಯಾಲಯದ ಆದೇಶವನ್ನು ಓದಿದ ಬಳಿಕವಷ್ಟೇ ನಾನು ಪ್ರತಿಕ್ರಿಯೆಯನ್ನು ನೀಡುತ್ತೇನೆ ಎಂದರು.
ಜಿಲ್ಲಾ ಘಟಕ ಬೆನ್ನುಬೆನ್ನಿಗೆ ಹಲವು ನೋಟೀಸುಗಳನ್ನು ನೀಡಿದೆ ಎಂಬುದು ಸರಿಯಲ್ಲ. ತಾಲೂಕು ಘಟಕಗಳ ಕೆಲವು ನಿರ್ಧಾರಗಳ ಹಾಗೂ ಕೆಲವು ಕ್ರಮಗಳ ಕುರಿತು ನಾವು ನೋಟೀಸು ನೀಡಿದ್ದೆವು. ಅವರು ನೀಡಿದ ಉತ್ತರ ತೃಪ್ತಿದಾಯಕ ವಾಗಿರಲಿಲ್ಲ. ಹೀಗಾಗಿ ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕ್ರಮಕೈಗೊಂಡಿದ್ದೇವೆ. ಇವೆಲ್ಲವೂ ಮನೆಯೊಳಗಿನ ವಿಷಯ. ಹೊರಗೆ ಹೆಚ್ಚು ಚರ್ಚೆ ಬೇಕಿಲ್ಲ ಎಂದು ಸುರೇಂದ್ರ ಅಡಿಗ ತಿಳಿಸಿದರು.
ನಾನಂತೂ ಸಾಮಾಜಿಕ ನ್ಯಾಯ, ಪ್ರತಿಭಾ ನ್ಯಾಯ, ಸಾಹಿತ್ಯಿಕ ನ್ಯಾಯ, ಸಾಹಿತ್ಯ ಪರಿಷತ್ತಿನ ನಿಯಮದಡಿ ಕೆಲಸ ಮಾಡುವವನು. ನಾನು ಯಾವತ್ತೂ ವ್ಯಕ್ತಿಗತ ಟೀಕೆ-ಟಿಪ್ಪಣಿ ಮಾಡುವುದಿಲ್ಲ. ಹೀಗಾಗಿ ಆದೇಶದ ಪ್ರತಿ ನೋಡದೇ ಏನೂ ಹೇಳಲಾರೆ ಎಂದರು.
ದುರದೃಷ್ಟಕರ ಬೆಳವಣಿಗೆ: ಡಾ.ಪಿ.ವಿ.ಭಂಡಾರಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನೊಳಗೆ ನಡೆದಿರುವ ಬೆಳವಣಿಗೆ ಕುರಿತು ಸಾಹಿತ್ಯ ಪ್ರೇಮಿ, ಕಸಾಪ ಸದಸ್ಯ ಹಾಗೂ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಅವರ ಅಭಿಪ್ರಾಯವನ್ನು ಕೇಳಿದಾಗ, ಈ ಘಟನೆ ನಿಜವಾಗಿಯೂ ದುರ ದೃಷ್ಟಕರ. ಇದನ್ನು ನೋಡಿದಾಗ ಕಸಾಪದಂಥ ಸಾಹಿತ್ಯಿಕ ಸಂಘಟನೆಗೂ, ರಾಜಕೀಯ ಪಕ್ಷಗಳಿಗೂ ಹೆಚ್ಚು ವ್ಯತ್ಯಾಸ ಇದೆ ಎನ್ನಿಸುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥದು ನಡೆಯುವುದು ದುರದೃಷ್ಟಕರ ಎಂದು ನುಡಿದರು.
ಕಸಾಪ ಜಿಲ್ಲಾಧ್ಯಕ್ಷರು, ತಾಲೂಕು ಘಟಕದ ಅಧ್ಯಕ್ಷರಿಗೆ ನೀಡಿರುವ ಕೆಲವು ನೋಟೀಸುಗಳನ್ನು ನಾನು ನೋಡಿದ್ದೇನೆ. ಕೆಲವು ತೀರಾ ಬಾಲಿಶ ಎನಿಸಿತ್ತು. ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕಿದ್ದ ಕಸಾಪ ಅದನ್ನು ಬಿಟ್ಟು ರಾಜಕೀಯ ಪಕ್ಷದಂತೆ ಕಾರ್ಯನಿರ್ವಹಿಸಬಾರದು ಎಂಬುದು ನನ್ನ ಅನಿಸಿಕೆ ಯಾಗಿದೆ ಎಂದರು.
ಯಾವುದೇ ಅನುದಾನವಿಲ್ಲದೇ ಕೆಲಸ ಮಾಡುವ ಕಸಾಪದಂಥ ಸಂಸ್ಥೆಯಲ್ಲಿ ಉಡುಪಿ ತಾಲೂಕು ಘಟಕ ನಿಜವಾಗಿಯೂ ಉತ್ತಮವಾಗಿ ಕೆಲಸ ಮಾಡಿದೆ. ಅದರ ಕೆಲವು ಯೋಜನೆಗಳು ಅದರಲ್ಲೂ ‘ಮನೆಯೇ ಗ್ರಂಥಾಲಯ’, ‘ಕಥೆ ಕೇಳೋಣ’, ‘ಕನ್ನಡ ಮಾತನಾಡು’ ನಿಜವಾಗಿಯೂ ಉತ್ತಮವಾದ, ಯಶಸ್ವಿಯಾದ ಯೋಜನೆ. ಇವುಗಳಿಗೆ ಉತ್ತೇಜನ ನೀಡುವುದು ಬಿಟ್ಟು ಸಣ್ಣ ಪುಟ್ಟ ವಿಷಯಗಳಿಗೆ ನೋಟೀಸು ನೀಡುವುದು, ಪದಚ್ಯುತಗೊಳಿಸುವುದು ಸರಿಯಲ್ಲ ಎಂದು ಡಾ.ಭಂಡಾರಿ ಅಭಿಪ್ರಾಯಪಟ್ಟರು.
ಇದರಲ್ಲಿ ‘ಇಗೋ’ (ಪ್ರತಿಷ್ಠೆ) ಸಮಸ್ಯೆ ಇರುವಂತೆ ನನಗೆ ಭಾಸವಾಗುತ್ತಿದೆ. ಇದನ್ನು ಬಿಟ್ಟು ಕನ್ನಡಕ್ಕಾಗಿ, ಕನ್ನಡ ಸಾಹಿತ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಿ ಎಂಬುದು ನನ್ನ ಮನವಿ ಎಂದು ಡಾ.ಪಿ.ವಿ.ಭಂಡಾರಿ ನುಡಿದರು.