ಸಂಸದ ಕೋಟರಿಂದ ಮುಖ್ಯಮಂತ್ರಿಗೆ ಪತ್ರ
ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ನ.13: ಗ್ರಾಮ ಪಂಚಾಯತ್ಗಳು ಈ ಹಿಂದೆ ನೀಡುತ್ತಿರುವ ಏಕ ನಿವೇಶನ ನಕ್ಷೆಯ ಅನುಮೋದನೆ ಮತ್ತು ಇ-ಸ್ವತ್ತಿನ 9-11ರ ವಿತರಣೆಯನ್ನು ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆಯ ಆದೇಶದಂತೆ, ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆಯಬೇಕಾಗಿದ್ದು, ಈ ಹೊಸ ಸುತ್ತೋಲೆಯಿಂದ ಜನಸಾಮಾನ್ಯರಿಗೆ ತುಂಬಾ ಸಮಸ್ಯೆ ಗಳಾಗುತ್ತಿವೆ ಎಂಬುದರತ್ತ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಅದರಲ್ಲೂ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ತುಂಡು ಭೂಮಿ ಗೊಂದಲ ದಿಂದ ಜನಸಾಮಾನ್ಯರು ಕಷ್ಟ ಪಡುತ್ತಿದ್ದಾರೆ. ಈ ಹಿಂದೆ ವಿನ್ಯಾಸ ಅನುಮೋದನೆಗೆ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದಿಂದ ತಾಂತ್ರಿಕ ಶಿಫಾರಸ್ಸುಗಳಿಗೆ ಅವಕಾಶಗಳಿದ್ದು, ಈಗ ಮಾಡಿರುವ ಬದಲಾವಣೆಯಿಂದ ಸಿಬ್ಬಂದಿಗಳ ಮತ್ತು ಮೂಲ ಸೌಕರ್ಯಗಳ ಕೊರತೆಯಿರುವ ಪ್ರಾಧಿಕಾರವನ್ನು ಆಶ್ರಯಿಸಬೇಕಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಇದರಿಂದ ಗ್ರಾಮ ಪಂಚಾಯತ್ಗಳ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಸ್ಥಳೀಯಾಡಳಿತ ಪ್ರತಿನಿಧಿಗಳು ಪ್ರತಿಕ್ರಿಯಿ ಸಿದ್ದು, ಒಟ್ಟಾರೆ ಏಕ ನಿವೇಶನ ನಕ್ಷೆಯ ಅನುಮೋದನೆ ಮತ್ತು 9+11ರ ವಿತರಣೆಯ ವ್ಯವಸ್ಥೆ ಯನ್ನು ಪಂಚಾಯತ್ ರಾಜ್ನಿಂದ ನಗರ ಪ್ರಾಧಿಕಾರಕ್ಕೆ ನೀಡಿರುವುದರಿಂದ ಬಡವರು ಸೇರಿದಂತೆ, ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದವರು ಹೇಳಿದ್ದಾರೆ.
ಆದ್ದರಿಂದ ಎಂದಿನಂತೆ ಗ್ರಾಮಪಂಚಾಯತ್ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ 9+11ರ ವಿತರಣೆ ಮತ್ತು ಏಕ ನಿವೇಶನ ನಕ್ಷೆಯ ಅನುಮೋದನೆೆ ನೀಡುವಂತೆ ಆದೇಶ ಮಾಡಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.