ಉಡುಪಿ: ಶ್ರೀಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವ ಪ್ರಾರಂಭ
ಉಡುಪಿ: ಲಕ್ಷ ದೀಪೋತ್ಸವದೊಂದಿಗೆ ಉತ್ಱಾನದ್ವಾದಶಿಯ ದಿನವಾದ ಇಂದಿನಿಂದ ಉಡುಪಿ ಶ್ರೀಕೃಷ್ಣನಿಗೆ ನಿತ್ಯೋತ್ಸವದ ಸಂಭ್ರಮ. ಇದರೊಂದಿಗೆ ನಿತ್ಯದ ರಥೋತ್ಸವವೂ ಪುನರಾರಂಭಗೊಳ್ಳಲಿದೆ.
ಸಂಪ್ರದಾಯದಂತೆ ಭಾಗೀರಥಿ ಜಯಂತಿಯಂದು ಗರ್ಭಗುಡಿ ಸೇರಿದ್ದ ಕೃಷ್ಣನ ಉತ್ಸವ ಮೂರ್ತಿ ಇಂದಿನಿಂದ ಮತ್ತೆ ರಥ ವನ್ನೇರುತ್ತಿದೆ. ಅಲ್ಲದೇ ಶ್ರೀಕೃಷ್ಣ ಮಠವೂ ಸೇರಿದಂತೆ ಉಡುಪಿ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಇಂದು ತುಳಸೀ ಪೂಜೆಯೂ ಸಮಾಪನಗೊಳ್ಳುತ್ತಿದೆ. ಇಂದು ಹೆಚ್ಚಿನ ಮನೆಗಳಲ್ಲಿ ತುಳಸೀಪೂಜೆಯ ಸಂಭ್ರಮದೊಂದಿಗೆ ಸಿಡಿಮದ್ದುಗಳ ಭರಾಟೆಯೂ ಕಂಡು ಬಂದಿದೆ.
ಇಂದು ಅಪರಾಹ್ನ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರ ನೇತೃತ್ವದಲ್ಲಿ ರಥಬೀದಿಯ ಸುತ್ತಲೂ ನೆಟ್ಟಿರುವ ದಳಿಗಳಲ್ಲಿ ಮಣ್ಣಿನ ಹಣತೆಯಿಟ್ಟು ಲಕ್ಷದೀಪೋತ್ಸವಕ್ಕೆ ಮುಹೂರ್ತ ನೆರವೇರಿಸಿದರು. ಬಳಿಕ ಸಂಜೆ ಮಧ್ವಸ ರೋವರದ ಮಧ್ಯದಲ್ಲಿರುವ ಅಲಂಕೃತ ಮಂಟಪದಲ್ಲಿ ಕ್ಷೀರಾಬ್ದಿ ಪೂಜೆ (ತುಳಸಿಪೂಜೆ) ನಡೆಯಿತು. ಬಳಿಕ ಮಧ್ವ ಸರೋವ ರದಲ್ಲಿ ತೆಪ್ಪೋತ್ಸವವೂ ನಡೆಯಿತು.
ರಾತ್ರಿ ಪೂಜೆ ಬಳಿಕ ಚಾರ್ತುಮಾಸ್ಯದ ಕಾರಣ ಒಳಗಿದ್ದ ಉತ್ಸವ ಮೂರ್ತಿಯನ್ನು ಸಕಲ ಬಿರುದಾವಳಿಗಳೊಂದಿಗೆ ಹೊರತಂದು ರಥೋತ್ಸವ ನಡೆಯಿತು. ಇದಕ್ಕಾಗಿ ಗರುಡ ರಥ ಹಾಗೂ ಮಹಾಪೂಜಾ ರಥಗಳನ್ನು ಬಳಸಲಾಯಿತು. ಒಂದರಲ್ಲಿ ಕೃಷ್ಣ-ಮುಖ್ಯಪ್ರಾಣ, ಇನ್ನೊಂದರಲ್ಲಿ ಅನಂತೇಶ್ವರ-ಚಂದ್ರಮೌಳೀಶ್ವರ ಉತ್ಸವ ಮೂರ್ತಿಗಳನ್ನು ಇರಿಸಲಾ ಗಿತ್ತು. ತೆಪ್ಪೋತ್ಸವ ಹಾಗೂ ಲಕ್ಷದೀಪೋತ್ಸವ ನ.16ರವರೆಗೆ ನಡೆಯಲಿದೆ.