ಉಡುಪಿ ಗ್ರಾಮೀಣ ಬಂಟರ ಸಂಘದಿಂದ ಬೃಹತ್ ಉದ್ಯೋಗ ಮೇಳ
ಉಡುಪಿ, ನ.13: ಮಣಿಪುರ ಕುಂತಳನಗರದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ನ ಕುಂತಳ ನಗರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ ಮೂರನೇ ವರ್ಷದ ಬೃಹತ್ ಉದ್ಯೋಗ ಮೇಳ ನ. 16 ಮತ್ತು 17ರಂದು ಕುಂತಳನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ ಎಂದು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಉದ್ಯೋಗ ಮೇಳ ಎಂಆರ್ಜಿ ಗ್ರೂಪ್ನ ಸಹಯೋಗದೊಂದಿಗೆ ನಡೆಯಲಿದೆ. ಉದ್ಯೋಗ ಮೇಳವನ್ನು ಬೆಳಗ್ಗೆ 9:30ಕ್ಕೆ ಎಂಆರ್ಜಿ ಗ್ರೂಪ್ನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮಣಿಪಾಲ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬ್ರಜೇಶ್ ಚೌಟ, ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಯಶ್ಪಾಲ್ ಸುವರ್ಣ, ಐವನ್ ಡಿಸೋಜಾ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್, ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ವಾಸುದೇವ ಶೆಟ್ಟಿ, ಮನೋಹರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಉದಯ್ಕುಮಾರ ಶೆಟ್ಟಿ ಮುನಿಯಾಲು, ಸಂತೋಷ್ ಶೆಟ್ಟಿ ಪುಣೆ, ಸುಗ್ಗಿ ಸುಧಾಕರ ಶೆಟ್ಟಿ,, ಪ್ರೊ ಶರತ್ ಆಳ್ವ ಭಾಗವಹಿಸಲಿದ್ದಾರೆ.
ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ಕಾರ್ಯಕ್ರಮ ನಿರ್ದೇಶಕಿಯಾಗಿರುವ ಪ್ರೊ.ದಿವ್ಯರಾಣಿ ಪ್ರದೀಪ್ ಮಾತನಾಡಿ ಕಳೆದ ಎರಡು ವರ್ಷಗಳಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1300ಕ್ಕಿಂತಲೂ ಹೆಚ್ಚು ನಿರುದ್ಯೋಗಳಿಗೆ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಸಿಕ್ಕಿದೆ.ಈ ಬಾರಿ ಈಗಾಗಲೇ ಸುಮಾರು 1500 ಅಭ್ಯರ್ಥಿ ಆನ್ಲೈನ್ನಲ್ಲಿ ಹೆಸರು ನೊಂದಾಯಿಸಿ ಕೊಂಡಿದ್ದು, ಒಟ್ಟು 2,500ಕ್ಕೂ ಅಧಿಕ ಮಂದಿಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಈ ಬಾರಿ ದೇಶದ ಸುಮಾರು 30 ಪ್ರಮುಖ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿವೆ. ಎಲ್ಲಾ ಕಂಪೆನಿಗಳು ಸೇರಿ 2500ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿಮಾಡಿಕೊಳ್ಳುವ ಸಾಧ್ಯತೆ ಇದೆ. ಎಸೆಸೆಲ್ಸಿಯಿಂದ ಸ್ನಾತಕೋತ್ತರ ಪದವಿವರೆಗೆ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಉದ್ಯೋಗಗಳಿಗೆ ಇಲ್ಲಿ ಅವಕಾಶವಿದೆ ಎಂದರು.
ಪ್ರೊ.ದಿವ್ಯಾರಾಣಿ ಪ್ರದೀಪ್ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳ ರಿಜಿಸ್ಟ್ರೇಷನ್ ನೋಂದಣಿಯ ನಿರ್ವಹಣೆ ಮಾಡಲಿದ್ದಾರೆ. 2 ದಿನ ಗಳ ಸಂದರ್ಶನ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಎಲ್ಲಾ ಸಿದ್ಧತೆ ಮಾಡಲಾಗಿದೆ. ಸಮಾರೋಪ ಸಮಾರಂಭ ನ.17ರ ಅಪರಾಹ್ನ 12:00ಕ್ಕೆ ನಡೆಯಲಿದೆ.
ಯಾವುದೇ ಜಾತಿ ಮತ ಬೇಧ ಇಲ್ಲದೆ ಎಲ್ಲಾ ಸಮುದಾಯಗಳ ನಿರುದ್ಯೋಗಿ ಯುವಕ-ಯುವತಿಯರಿಗೆ, ಪ್ರೆಷರ್ಗಳಿಗೆ ಹಾಗೂ ಅನುಭವಿ ಗಳಿಗೂ ಅವಕಾಶವಿದ್ದು, ನೊಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದು ಅಶೋಕ್ಕುಮಾರ್ ಶೆಟ್ಟಿ ತಿಳಿಸಿದರು. ಪ್ರತಿಯೊಬ್ಬ ಅಭ್ಯರ್ಥಿಗೆ 5 ಕಂಪನಿಗಳ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶವಿದ್ದು, ಪ್ರತಿಯೊಬ್ಬರೂ 5 ಸೆಟ್ ಬಯೋಡಾಟಾ ತರಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿಗಳಾದ ಗೋಪಾಲ್ ಶೆಟ್ಟಿ ಬೆಳ್ಳೆ,, ಹರೀಂದ್ರ ನಾಥ್ ಹೆಗ್ಡೆ ಕೊರಂಗ್ರಪಾಡಿ, ದಯಾನಂದ ಶೆಟ್ಟಿ ಕಲ್ಮಜೆ, ರಂಜನಿ ಹೆಗ್ಡೆ ಬೆಳ್ಳೆ, ವಿಜಿತ್ ಶೆಟ್ಟಿ, ಪದ್ಮನಾಭ ಹೆಗ್ಡೆ ಉಪಸ್ಥಿತರಿದ್ದರು.