ಮಡಾಮಕ್ಕಿ: ವರ್ಷ ಕಳೆದರೂ ಪೂರ್ಣಗೊಳ್ಳದ ಮೊಬೈಲ್ ಟವರ್
ಕುಂದಾಪುರ, ನ.15: ಮೊಬೈಲ್ ನೆಟ್ವರ್ಕ್ ವಂಚಿತ ಮಡಾಮಕ್ಕಿ ಗ್ರಾಮದ ಹಂಜ ಹಾಗೂ ಬೆಪ್ಡೆ ಭಾಗದ ಗ್ರಾಮಸ್ಥರಿಗೆ ಅನುಕೂಲವಾಗಲೆಂದು ಒಂದೂವರೆ ವರ್ಷದ ಹಿಂದೆ ಬಿಎಸ್ಎನ್ಎಲ್ ಟವರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡ ಲಾಗಿತ್ತು. ಆದರೆ ಈ ಕಾಮಗಾರಿ ಈಗ ಹಳ್ಳ ಹಿಡಿದಿದ್ದು, ವರ್ಷವಾದರೂ ಶೇ.10ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ.
ಬಹು ವರ್ಷಗಳ ಬೇಡಿಕೆಯೊಂದು ಈಡೇರುವ ಕಾಲ ಹತ್ತಿರದಲ್ಲಿದೆ ಎಂಬ ಮಡಾಮಕ್ಕಿಯ ಹಳ್ಳಿಗಾಡಿನ ಪ್ರದೇಶವಾದ ಹಂಜ, ಬೆಪ್ಡೆ ಭಾಗದ ಗ್ರಾಮಸ್ಥರ ಗೋಳು ಮಾತ್ರ ಇನ್ನೂ ತಪ್ಪಿಲ್ಲ. ಈಗಲೂ ಒಂದು ಕರೆಗಾಗಿ ಕಿ.ಮೀ. ಗಟ್ಟಲೆ ದೂರ ಅಲೆದಾಟ ನಡೆಸಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ. ಕೋವಿಡ್ ಸಂದರ್ಭದಲ್ಲಿ ಈ ಭಾಗದ ವಿದ್ಯಾರ್ಥಿಗಳು ಎದುರಿಸಿದ ಭವಣೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಕೊನೆಗೂ ಈ ಭಾಗದಲ್ಲಿ ಟವರ್ ನಿರ್ಮಾಣಕ್ಕೆ ಹಸಿರು ನಿಶಾನೆ ದೊರಕಿತ್ತು.
ಎರಡು ಟವರ್ ನಿರ್ಮಾಣ ಕಾಮಗಾರಿ: ಹಂಜ ಹಾಗೂ ಬೆಪ್ಡೆ ಭಾಗಕ್ಕೆ ಮೊಬೈಲ್ ನೆಟ್ವರ್ಕ್ ಸಂಪರ್ಕ ಕಲ್ಪಿಸುವ ಸಲು ವಾಗಿ ಟವರ್ ಬೇಕು ಅನ್ನುವ ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆಗೆ ಕೊನೆಗೂ ಬಿಸ್ಸೆನ್ನೆಲ್ ಇಲಾಖೆ ಸ್ಪಂದಿಸಿದ್ದು, ಎರಡು ಟವರ್ಗಳ ನಿರ್ಮಾಣಕ್ಕೆ ಅಸ್ತು ಎಂದಿತ್ತು. ಅದರಂತೆ ಒಂದೂವರೆ ವರ್ಷದ ಹಿಂದೆಯೇ ಕಾಮಗಾರಿಗೆ ಅಡಿಗಲ್ಲು ಹಾಕಲಾಯಿತು. ಆರಂಭದಲ್ಲಿ ತುಸು ವೇಗದಲ್ಲಿ ಸಾಗಿದ್ದಂತೆ ಕಂಡ ಕಾಮಗಾರಿ, ಅಷ್ಟೇ ಬೇಗ ನಿಂತಿದ್ದು ಮಾತ್ರ ಇಲ್ಲಿನ ಜನರ ದೌರ್ಭಾಗ್ಯವೇ ಸರಿ.
ಟವರೊಂದನ್ನು ತಂದು ನಿಲ್ಲಿಸಿರುವುದೊಂದೇ ದೊಡ್ಡ ಸಾಧನೆಯಾಗಿದೆ. ಅದನ್ನು ತಂದು ನಿಲ್ಲಿಸಿ, ವರ್ಷವಾದರೂ ಇನ್ನೂ ಅದರಿಂದ ಮುಂದಿನ ಕಾಮಗಾರಿ ಮಾತ್ರ ಆಗಿಲ್ಲ. ಇದಕ್ಕೆ ಯಾವುದೇ ಸಂಪರ್ಕ ಕಲ್ಪಿಸಿಲ್ಲ. ಅಗತ್ಯವಿರುವ ವಿದ್ಯುತ್ ಸಂಪರ್ಕ, ಜನರೇಟರ್ ವ್ಯವಸ್ಥೆ, ಸೋಲಾರ್ ಸಂಪರ್ಕ ವ್ಯವಸ್ಥೆ ಯಾವುದೂ ಸಹ ಇನ್ನೂ ಆಗಿಲ್ಲ. ಎರಡೂ ಟವರ್ಗಳ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಯಾವಾಗ ಪೂರ್ಣಗೊಳ್ಳುವುದು ಅನ್ನುವ ಚಿಂತೆ ಇಲ್ಲಿನ ಜನರದ್ದಾಗಿದೆ.
ನಕ್ಸಲ್ ಸಮಸ್ಯೆ ಬಾಧಿತ ಮಡಾಮಕ್ಕಿ ಗ್ರಾಮದ ಈ ಹಂಜ, ಎಡ್ಮಲೆ, ಕಾರಿಮಲೆ, ಬೆಪ್ಡೆ ಭಾಗದ ಜನರು ಟವರ್ ನಿರ್ಮಾಣಕ್ಕಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮೊರೆಯಿಡುತ್ತಿದ್ದರೂ, ಯಾವುದೇ ಪ್ರಯೋಜನ ವಾಗಿಲ್ಲ. ಟವರ್ ಪೂರ್ಣಗೊಳ್ಳಲು ಇನ್ನೆಷ್ಟು ಸಮಯ ಬೇಕು ಎಂದು ಇಲ್ಲಿನ ಜನ ಕೇಳತೊಡಗಿದ್ದಾರೆ. ಇನ್ನಾದರೂ ಟವರ್ ನಿರ್ಮಾಣ ಕಾಮಗಾರಿಗೆ ವೇಗ ಸಿಗಲಿ, ಆ ಮೂಲಕ ಇಲ್ಲಿನ ಜನರ ಬಹುಕಾಲದ ನೆಟ್ವರ್ಕ್ ಸಮಸ್ಯೆ ಬಗೆಹರಿಯಲಿ ಅನ್ನುವುದು ಗ್ರಾಮಸ್ಥರ ಒತ್ತಾಸೆಯಾಗಿದೆ.
ಒಂದು ಕರೆಗೆ ಆರೇಳು ಕಿ.ಮೀ. ಸಂಚಾರ
ಮಡಾಮಕ್ಕಿ ಗ್ರಾಮದ ಹಂಜ, ಕಾರಿಮಲೆ, ಎಡ್ಮಲೆ ಭಾಗದಲ್ಲಿ ಯಾವುದೇ ನೆಟ್ವರ್ಕ್ ಸೌಲಭ್ಯವಿಲ್ಲ. ಇಲ್ಲಿನ ಜನ ತುರ್ತು ಕರೆ ಮಾಡಬೇಕಾದರೂ ಸುಮಾರು 6-7 ಕಿ.ಮೀ. ದೂರದ ಮಡಾಮಕ್ಕಿಗೆ ಬರಬೇಕು. ಇಲ್ಲಿ ಸುಮಾರು 200ಕ್ಕೂ ಮಿಕ್ಕಿ ಮನೆಗಳಿವೆ. ಇನ್ನು ಬೆಪ್ಡೆ ಭಾಗದಲ್ಲೂ ಯಾವುದೇ ನೆಟ್ವರ್ಕ್ ಸಂಪರ್ಕವಿಲ್ಲ. ಇಲ್ಲಿಯೂ 200ಕ್ಕೂ ಮಿಕ್ಕಿ ಮನೆಗಳಿವೆ. ಇವರು ಸಹ ನೆಟ್ವರ್ಕ್ ಸಿಗಬೇಕಾದರೆ 3-4 ಕಿ.ಮೀ. ದೂರದ ಮಾಂಡಿ ಮೂರ್ಕೈಗೆ ಬರಬೇಕು.
ಯಾರಿಗಾದರೂ ಹಠಾತ್ತನೆ ಅನಾರೋಗ್ಯ ಉಂಟಾದರೆ, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು ವಾಹನ ಕರೆಸಲು ಇಲ್ಲಿನ ಜನ ಈಗಲೂ ಪ್ರಯಾಸ ಪಡುತ್ತಿದ್ದಾರೆ. ಒಂದೆಡೆ ನೆಟ್ವರ್ಕ್ ಇಲ್ಲದಿದ್ದರೆ, ಇನ್ನೊಂದೆಡೆ ದುರ್ಗಮವಾದ ರಸ್ತೆ. ಕಾಡಂಚಿನಲ್ಲಿ ನೆಲೆಸಿರುವ ಇಲ್ಲಿನ ಜನ ಕನಿಷ್ಠ ಮೂಲಭೂತ ಸೌಲಭ್ಯವೂ ಸಿಗದೇ, ನಿತ್ಯ ಸಂಕಷ್ಟಪಡುತ್ತಿರುವುದು ಮಾತ್ರ ಆಳುವ ವರ್ಗಕ್ಕೆ ಗೋಚರಿಸದಿರುವುದು ದುರಂತ.
‘ಹಂಜ, ಕಾರಿಮನೆ, ಎಡ್ಮಲೆ, ಬೆಪ್ಡೆ ಭಾಗದ ದಶಕಗಳ ಬೇಡಿಕೆಯಾದ ನೆಟ್ವರ್ಕ್ ಟವರ್ ನಿರ್ಮಾಣ ಕಾಮಗಾರಿ ಶುರು ವಾಗಿದ್ದರೂ ಕಳೆದ ಒಂದು ವರ್ಷದಿಂದ ಕಾಮಗಾರಿ ನೆನೆಗುದ್ದಿಗೆ ಬಿದ್ದಿದೆ. ಟವರ್ಗೆ ಸೋಲಾರ್, ವಿದ್ಯುತ್, ಜನರೇಟರ್ ಅಳವಡಿಕೆ, ಕಬ್ಬಿಣದ ಪಟ್ಟಿಗಳಿಗೆ ಬಣ್ಣ ಹಚ್ಚುವಿಕೆ ಸಹಿತ ಆಗಿದ್ದಕ್ಕಿಂತ ಹೆಚ್ಚಿನ ಕಾಮಗಾರಿ ಬಾಕಿಯಿದೆ. ಈ ಬಗ್ಗೆ ಅಧಿಕಾರಿ ಗಳಾಗಲಿ, ಗುತ್ತಿಗೆದಾರರಾಗಲಿ ಈ ಕಡೆಗೆ ತಲೆ ಹಾಕಿಯೂ ನೋಡುತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಿ. ಜನರಿಗೆ ಪ್ರಯೋಜನ ಸಿಗಲಿ’.
-ದಯಾನಂದ ಪೂಜಾರಿ, ಮಡಾಮಕ್ಕಿ ಗ್ರಾಪಂ ಸದಸ್ಯ.