ವಿದ್ಯುತ್ ಪ್ರವಹಿಸಿ ಮಹಿಳೆ ಮೃತ್ಯು
ಕಾರ್ಕಳ, ನ.15: ಅಣ್ಣನ ಉತ್ತರಕ್ರಿಯೆಗೆ ಸಿದ್ಧತೆ ವೇಳೆ ವಿದ್ಯುತ್ ಪ್ರವಹಿಸುತಿದ್ದ ಶಾಮಿಯಾನದ ಕಂಬ ಸ್ಪರ್ಶಿಸಿದ ತಂಗಿ ಸಾವಿಗೀಡಾದ ಘಟನೆ ತಾಲೂಕಿನ ನಿಟ್ಟೆ ಗ್ರಾಮದ ಬೋಂಟ್ರಮನೆ ಎಂಬಲ್ಲಿ ನಡೆದಿದೆ.
ನಿಟ್ಟೆ ಗ್ರಾಮದ ರಾಘು ಎಂಬವರ ಉತ್ತರ ಕ್ರಿಯೆ ನ.15ರಂದು ನಡೆಯಬೇಕಿದ್ದು, ಈ ಹಿನ್ನೆಲೆಯಲ್ಲಿ ನ.14ರ ರಾತ್ರಿ ಸಿದ್ಧತೆ ನಡೆದಿತ್ತು. ಅಣ್ಣನ ಉತ್ತರ ಕ್ರಿಯೆಯಲ್ಲಿ ಭಾಗವಹಿಸಲು ಆಗಮಿಸಿದ್ದ ತಂಗಿ ಲಲಿತಾ (58) ರಾತ್ರಿ 9ಗಂಟೆ ಸುಮಾರಿಗೆ ಶಾಮಿಯಾನದ ಕಬ್ಬಿಣದ ಕಂಬವನ್ನು ಮುಟ್ಟಿದ್ದು, ಅದರಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ವಿದ್ಯುತ್ ಆಘಾತಕ್ಕೊಳಗಾಗಿ ಬಿದ್ದಿದ್ದರು.
ತಕ್ಷಣ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಲಲಿತಾ ಮೃತಪಟ್ಟಿರುವುದಾಗಿ ತಿಳಿಸಿದರು. ನಿಟ್ಟೆ ಸರಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತಿದ್ದ ಲಲಿತಾ ಪುತ್ರನನ್ನು ಅಗಲಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story