ಸಂವಹನದ ಕೊರತೆಯೇ ಇಂದಿನ ಎಲ್ಲಾ ಸಮಸ್ಯೆಗಳ ಮೂಲ: ರಂಗ ನಿರ್ದೇಶಕ ಪ್ರಸನ್ನ
ಕಾಲೇಜು ವಿದ್ಯಾರ್ಥಿಗಳ ‘ರಂಗಭಾಷೆ’ ಶಿಬಿರಕ್ಕೆ ಚಾಲನೆ
ಕಲ್ಯಾಣಪುರ: ದೇಶದ ಹಲವು ಭಾಷೆ-ಸಂಸ್ಕೃತಿ, ಧರ್ಮ ಒಟ್ಟಾಗಿ ಬದುಕಲು ಅಗತ್ಯವಿರುವುದೇ ಸಂವಹನ. ಆದರೆ ಇಂದು ಸಂವಹನದ ಕೊರತೆಯಿಂದಲೇ ಎಲ್ಲಾ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲೂ ನಮ್ಮ ಯುವಜನಾಂಗಕ್ಕೆ ಸಂವಹನದ ಅತಿ ಅಗತ್ಯವಿದೆ ಎಂಬುದು ನನ್ನ ಅನಿಸಿಕೆ ಎಂದು ಖ್ಯಾತ ರಂಗ ನಿರ್ದೇಶಕ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯ ರಂಗಭೂಮಿ ಸಂಸ್ಥೆ, ಕಾರ್ಕಳದ ಯಕ್ಷ ರಂಗಾಯಣ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜುಗಳ ಸಹ ಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಉಡುಪಿ ಪರಿಸರದ ಆಯ್ದ 12 ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ರಂಗ ಕಾರ್ಯಾಗಾರ ಹಾಗೂ ಕಿರು ನಾಟಕಗಳ ಉತ್ಸವ ‘ರಂಗಭಾಷೆ’ಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಸಂವಹನ ಇಂದಿನ ಎಲ್ಲಾ ಪಿಡುಗಿಗೆ ಉತ್ತರವಾಗಿದೆ. ವಿಶ್ವದಲ್ಲಿ ಯುದ್ಧ ರಾರಾಜಿಸತೊಡಗಿದೆ. ದೇಶದಲ್ಲಿ ಒಂದು ಜನಾಂಗ, ಇನ್ನೊಂದು ಜನಾಂಗವನ್ನು ಸಂಶಯದಿಂದ ನೋಡುತ್ತಿದೆ. ಇನ್ನೊಂದು ಜನಾಂಗದ ತಪ್ಪುಗಳನ್ನು ಮಾತ್ರ ಎತ್ತಿ ತೋರಿಸಲಾಗುತಿದೆ. ಇದಕ್ಕೆ ಸಂವಹನದ ಕೊರತೆಯೇ ಕಾರಣ ಎಂದವರು ಅಭಿಪ್ರಾಯಪಟ್ಟರು.
ಮಾತನ್ನು ಎಲ್ಲರೂ ಆಡುತ್ತಾರೆ. ಆದರೆ ರಂಗದಲ್ಲಿ ಆಡುವ ಮಾತೇ ಬೇರೆ. ಅದು ಹೃದಯದ ಮಾತಾಗಿರುತ್ತದೆ. ಅದು ಮುಟ್ಟಿದ ಭಾಷೆ, ನೋಡುವ ಭಾಷೆ, ನೋವಿನ ಭಾಷೆ, ನಲಿವಿನ ಭಾಷೆ. ಇದನ್ನು ಬೇರೆಲ್ಲೂ ಕಲಿಯಲಾಗದು. ಈ ಭಾಷೆ ಯನ್ನು ಕನ್ನಡ ಮೇಸ್ಟ್ರಾಗಲಿ, ಇಂಗ್ಲೀಷ್ ಮೇಸ್ಟ್ರಾಗಲಿ ತರಗತಿಯಲ್ಲಿ ಕಲಿಸಲು ಸಾಧ್ಯವಿಲ್ಲ. ಇದು ಸಂಕೀರ್ಣತೆ ಇಲ್ಲದ ಭಾಷೆ; ಹೃದಯದ ಭಾಷೆ. ಇದನ್ನು ಹೇಳುವುದು-ಕೇಳುವುದು ನಾಟಕದಲ್ಲಿ ಸಂಭಾಷಣೆಯ ಮೂಲಕ. ಇದನ್ನು ರಂಗಭಾಷೆ ಎನ್ನುತ್ತಾರೆ ಎಂದರು.
ಕಹಿಮಾತನ್ನು ಗುಳಿಗೆಯಂತೆ ಮನರಂಜನೆಯ ರೂಪದಲ್ಲಿ ನೀಡುವುದೇ ರಂಗಭೂಮಿ. ಕಾಳಿದಾಸನ ಕಾಲದಲ್ಲಿ ಅಸಾಮ ರಸ್ಯ ಕಡಿಮೆ ಇತ್ತು. ಆದರೆ ಇಂದು ಅದು ಅಸಾಮಾನ್ಯ ರೀತಿಯಲ್ಲಿದೆ. ಸಂವಹನ ಈ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ ಎಂದರು.
ಇಂದು ನಾಟಕವನ್ನು ಸಿನಿಮಾ ನುಂಗಿದೆ. ಇದೀಗ ಸಿನಿಮಾವನ್ನು ಒಟಿಟಿ ನುಂಗಿದೆ. ಕನ್ನಡವನ್ನು ಇಂಗ್ಲಿಷ್ ನುಂಗಿದೆ. ಹೀಗೆ ಪರಸ್ಪರ ನುಂಗುತ್ತಿರುವ ವಿಚಿತ್ರ ಸನ್ನಿವೇಶದಲ್ಲಿ ಸಂವಹನ ಸಾಧ್ಯವಾಗಬೇಕಿದೆ. ಪುಟ್ಟ ಮಗುವಿನಲ್ಲಿ ಅಸಾಧಾರಣ ಅಭಿನಯ ಶಕ್ತಿ ಇರುತ್ತದೆ. ಸಹಜವಾಗಿ ಮಕ್ಕಳಿಗಿರುವ ಸಂವಹನ ಸಾಧ್ಯತೆಯನ್ನು ಶಿಬಿರದಲ್ಲಿ ನಿಮಗೆ ಹೇಳಿಕೊಡಲಾಗು ತ್ತದೆ ಎಂದು ನಾಡಿನ ಖ್ಯಾತ ರಂಗಕರ್ಮಿಗಳಲ್ಲಿ ಅಗ್ರಸ್ಥಾನದಲ್ಲಿರುವ ಪ್ರಸನ್ನ ನುಡಿದರು.
ಹಿಂದೆ ಯುರೋಪಿನಲ್ಲಿ ಶೈಕ್ಷಣಿಕ ರಂಗಭೂಮಿ ಎಂಬ ಚಳವಳಿಯೊಂದು ಆರಂಭವಾಗಿತ್ತು.ಇಂದು ಅದು ಅಸಾಧಾರಣ ರೀತಿ ಬೆಳೆದಿದೆ. ಅದನ್ನು ಅಲ್ಲಿನ ಪ್ರತಿ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಅದೇ ರೀತಿ ಇಂದು ಉಡುಪಿಯ ಶಾಲೆ ಗಳಲ್ಲೂ ಯಕ್ಷಗಾನವನ್ನು ಕಲಿಸಿಕೊಡಲಾಗುತ್ತಿದೆ. ಇದೊಂದು ದೊಡ್ಡ ಚಳವಳಿಯಾಗಿ ಕರಾವಳಿಯಲ್ಲಿ ಶೈಕ್ಷಣಿಕ ರಂಗ ಭೂಮಿಗೆ ಪೂರಕವಾಗಿ ಬೆಳೆಯುತ್ತಿದೆ. ಈ ಮೂಲಕ ಭಾಷೆ ಹಾಗೂ ಸಂಸ್ಕೃತಿ ಗೆಲ್ಲುತ್ತದೆ ಎಂದರು.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ನಟ, ನಿರ್ದೇಶಕ, ಮೈಸೂರು ನಟನ ಸಂಸ್ಥೆಯ ಮಂಡ್ಯ ರಮೇಶ್, ಕರ್ನಾಟಕ ರಂಗ ಸಮಾಜದ ಸದಸ್ಯ ಹಾಗೂ ರಂಗತಜ್ಞ ಶಶಿಧರ ಭಾರಿಘಾಟ್, ರಂಗನಿರ್ದೇಶಕಿ ಶ್ವೇತಾರಾಣಿಎಚ್.ಕೆ., ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ರಂಗಭೂಮಿಯ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ರಾಜಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು.
ರಂಗಭೂಮಿ ರಂಗಭಾಷೆ ಕಾರ್ಯಾಗಾರದ ಸಂಚಾಲಕ ಎಚ್. ಜಯಪ್ರಕಾಶ್ ಕೆದ್ಲಾಯ ಅತಿಥಿಗಳನ್ನು ಸ್ವಾಗತಿಸಿದರೆ, ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮನ ಐಯಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ಯುವ ಮನಸ್ಸು ಗಳು ಭ್ರಷ್ಟಗೊಳ್ಳುವುದನ್ನು ತಡೆಯಲು ರಂಗಾಯಣ ಆಯೋಜಿಸಿರುವ ರಂಗ ಶಿಬಿರದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಸಂಚಾಲಕ ರವಿರಾಜ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.
ಮೂರು ದಿನಗಳ ರಂಗಶಿಬಿರದಲ್ಲಿ 12 ಕಾಲೇಜುಗಳ 100 ಕ್ಕೂ ಅಧಿಕ ರಂಗಾಸಕ್ತ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ರಂಗಭೂಮಿಯ ವಿವಿಧ ಸಾಧ್ಯತೆಗಳ ಕುರಿತು ಉಪನ್ಯಾಸ, ಸಂವಾದದೊಂದಿಗೆ ನಾಲ್ಕು ನಾಟಕಗಳ ಪ್ರದರ್ಶನವೂ ನಡೆಯಲಿದೆ.