ಸಂಸ್ಕೃತಿ, ನಂಬಿಕೆಗಳ ಹೆಸರಲ್ಲಿ ಅಜಲು ಚಾಕರಿ ಖಾಯಂಗೊಳಿಸುವ ಹುನ್ನಾರ: ಪಾಂಗಾಳ ಬಾಬು ಕೊರಗ ಆತಂಕ
ಕಾಪು ಕನ್ನಡ ಸಾಹಿತ್ಯ ಸಮ್ಮೇಳನ
ಉಡುಪಿ: ಪ್ರಾಚೀನ ತುಳುನಾಡಿನ ರಾಜ್ಯಾಡಳಿತದ ಪಳೆಯುಳಿಕೆ ಯಂತಿರುವ ಅಜಲು ಪದ್ಧತಿಯು ಇಂದಿಗೂ ಕೆಲವು ತಳಸ್ತರದ ಸಮುದಾಯಗಳಲ್ಲಿ ಕಂಡುಬರುತ್ತಿದೆ. ಒಂದು ಸಮುದಾಯವನ್ನು ಒಂದು ನಿರ್ದಿಷ್ಟ ಕೆಲಸಕ್ಕೆ ಸೀಮಿತಗೊಳಿ ಸಿರುವ ಈ ಸಂಪ್ರದಾಯವು ಆ ಸಮುದಾಯದ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಸಂಸ್ಕೃತಿ, ನಂಬಿಕೆಗಳ ಹೆಸರಲ್ಲಿ ಈ ಅಜಲು ಚಾಕರಿಯನ್ನು ಖಾಯಂಗೊಳಿಸುವ ಹುನ್ನಾರಗಳೂ ನಡೆಯುತ್ತಿವೆ. ಇದು ಒಂದು ಸಮುದಾಯದ ಸರ್ವ ತೋಮುಖ ಅಭಿವೃದ್ಧಿಗೆ ತೊಡಕಾಗುತಿದೆ ಎಂದು ಪಾಂಗಾಳ ಬಾಬು ಕೊರಗ ಆತಂಕ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಆಶ್ರಯದಲ್ಲಿ ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಲಾದ ಕಾಪು ತಾಲೂಕು ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ನೆಲದುಲಿ’ ಇದರ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಅಜಲು ಪದ್ಧತಿ ಅಂದಿನ ಕಾಲಕ್ಕೆ ಅದು ಸರಿ ಎನಿಸಿದ್ದರೂ ಇಂದು ಅದು ಬದಲಾಗಲೇಬೇಕಾಗಿದೆ. ಕಾನೂನಿನಂತೆ ಶಿಕ್ಷಣವು ಎಲ್ಲರಿಗೂ ಸಮಾನ ವಾಗಿದ್ದರೂ, ಈ ಸಾಮಾಜಿಕ ಕಾರಣಗಳಿಂದ ಈ ವರ್ಗಗಳ ಜನರಿಗೆ ತಲುಪುತ್ತಿಲ್ಲ. ಕಲೆ, ಸಂಸ್ಕೃತಿ ಗಳು ಎಲ್ಲೆ ಮೀರಿ ಬೆಳೆಯಬೇಕು. ಅದು ಜನರ ಬದುಕನ್ನು ಉತ್ತೇಜಿಸಬೇಕು ಎಂದರು.
ಇಂದು ಕರ್ನಾಟಕದಲ್ಲಿ ಕನ್ನಡ ಸ್ಥಿತಿಗತಿ ಅಯೋಮಯವಾಗಿ ಕಾಣುತ್ತಿದೆ. ಇತರ ಭಾಷೆಗಳ ಭರಾಟೆಯಲ್ಲಿ ಕನ್ನಡ ನಜ್ಜು ಗುಜ್ಜಾಗುತ್ತಿದೆ. ಅಲ್ಲದೆ ನಮ್ಮಲ್ಲಿನ ಆಂಗ್ಲ ಭಾಷೆಯ ವ್ಯಾಮೋಹ ನಮ್ಮತನವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ಕನ್ನಡದ ಕೆಲವು ಹೋರಾಟಗಾರರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಕನ್ನಡದಲ್ಲಿ ಬರೆಯುವವರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಓದುಗರ ಸಂಖ್ಯೆ ಕಡಿಮೆ ಆಗುತ್ತಿದೆ. ಇಷ್ಟೆಲ್ಲಾ ತಲ್ಲಣಗಳ ಹೊರತಾಗಿಯೂ ಕನ್ನಡ ನಾಡು, ನುಡಿ ಉಳಿಯಬೇಕು. ಬೆಳೆಯಬೇಕು, ಮುಂದಿನ ಪೀಳಿಗೆಗೆ ದಾಟಿಸಬೇಕು.
ಸಮ್ಮೇಳನ ಉದ್ಘಾಟನೆ: ಸಮ್ಮೇಳನವನ್ನು ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸೃಷ್ಟಿಯ ಒಳಿತುಗಳ ದೇಶ, ವಿವಿಧತೆಯಲ್ಲಿ ಏಕಾಗ್ರತೆ ಸೂತ್ರ ಬೆಸೆದ ಸಂಸ್ಕೃತಿ, ಗತಯುಗದ, ವೈಭವದ ಸ್ಮರಣೆ ಹೊಸಯುಗದ ಬದುಕಿನೊಂದಿಗೆ ನಾವು ಮಾರ್ಗದರ್ಶನ ನೀಡುವ ಯೋಚನೆ ಯೋಜನೆ ಹರಿದುಬರಬೇಕಾಗಿದೆ ಎಂದರು.
ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಲ್ಕೆಜಿಯಿಂದ ಆಂಗ್ಲ ಮಾಧ್ಯಮ ಆರಂಭದಿಂದ ಮಕ್ಕಳ ದಾಖಲಾತಿ ಹೆಚ್ಚಾದರೂ, ಕನ್ನಡ ಮಾಧ್ಯಮ ವಿಭಾಗದಲ್ಲಿ ಮಕ್ಕಳ ದಾಖಲಾತಿ ಯಾಗದಿರುವುದು ಬೇಸರದ ಸಂಗತಿ. ಅದು ಮುಂದೊಂದು ದಿನ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಾಗಿ ಕನ್ನಡಕ್ಕೆ ಅಪಾಯ ತರಲಿದೆ ಎಂದು ಎಚ್ಚರಿಸಿದರು.
ಸಮ್ಮೇಳನಾಧ್ಯಕ್ಷರಿಗೆ ಕನ್ನಡ ಧ್ವಜ ಹಸ್ತಾಂತರಿಸಿದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆ.ಎಸ್.ಶ್ರೀಧರ ಮೂರ್ತಿ ಮಾತನಾ ಡಿದರು. ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ರಾಷ್ಟ್ರ ಧ್ವಜಾರೋಹಣ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪರಿಷತ್ ಧ್ವಜಾರೋಹಣ ನೆರವೇರಿಸಿದರು.
ಕಾಪು ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಗ್ರಾಪಂ ಉಪಾಧ್ಯಕ್ಷ ರಾಯೇಶ್ವರ ಪೈ, ಪಿಡಿಒ ಶಶಿಧರ ಆಚಾರ್ಯ, ಪಿ.ಆರ್. ಶ್ರೀನಿವಾಸ ಉಡುಪ, ಲಕ್ಷ್ಮಣ ಶೆಟ್ಟಿ ನಂದಿಕೂರು, ಜೆರಾಲ್ಡ್ ಸಂದೀಪ್ ಡಿಮೆಲ್ಲೋ, ಮುಹಮ್ಮದ್ ಶೇಖಬ್ಬ, ಗೋಕುಲ್ ಪಲಿಮಾರು, ಪ್ರಸಾದ್ ಪಲಿಮಾರು, ಶೋಭಾ, ಜಿತೇಂದ್ರ ಪುರ್ಟಾಡೋ, ಯೋಗೀಶ್ ಸುವರ್ಣ, ಸತೀಶ್ ಕುಮಾರ್ ಹೊಯಿಗೆ, ಲಕ್ಷ್ಮಣ ಕೋಟ್ಯಾನ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ, ನೀಲಾನಂದ ನಾಯ್ಕ್, ಕೃಷ್ಣಕುಮಾರ್ ಮಟ್ಟು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷೆ ಗ್ರೆಟ್ಟಾ ಮೊರಾಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪಿಲಾರು ಸುಧಾಕರ ಶೆಣೈ, ಎಸ್.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.
ಪಲಿಮಾರು ಅಸತಿಪಡ್ಪುಮೈದಾನದಿಂದ ಸಮ್ಮೇಳನ ಸರ್ವಾಧ್ಯಕ್ಷರ ಸ್ವಾಗತ ಹಾಗೂ ಕನ್ನಡ ಮಾತೆ ಭುವನೇಶ್ವರೀ ದೇವಿಯ ಶೋಭಾಯಾತ್ರೆಗೆ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ವಿವಿಧ ಕಲಾತಂಡಗಳ ಪಾಲ್ಗೊಳ್ಳುವಿಕೆಯಲ್ಲಿ ಸಮ್ಮೇಳನ ಸಭಾಂಗಣದವರೆಗೆ ಆಕರ್ಷಕ ಪುರ ಮೆರವಣಿಗೆ ನಡೆಯಿತು. ಗಣೇಶ್ ಗಂಗೊಳ್ಳಿ ಮತ್ತು ತಂಡದಿಂದ ಕನ್ನಡ ಗೀತ ಗಾಯನ, ಪಡುಬೆಳ್ಳೆ ಪಾಂಬೂರು ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡದ ಕಲಾಪ್ರಸ್ತುತಿ, ವಿವಿಧ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪುಸತಿಕ ಪ್ರದರ್ಶನ ಹಾಗೂ ಕಲಾವಿದ ವೆಂಕಿ ಪಲಿಮಾರು ರಚಿಸಿದ ಕಲಾಕೃತಿಗಳ ನಡುವೆ ಛಾಯಾಚಿತ್ರ ತೆಗೆದುಕೊಳ್ಳುವ ವ್ಯವಸ್ಥೆ ಜನ ಹಾಗೂ ಸಾಹಿತ್ಯಾಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
‘ಕಾಪು ತಾಲೂಕಿನಲ್ಲಿ ಜಾತಿ, ಧರ್ಮಗಳ ಮಧ್ಯೆ ಸಾಮರಸ್ಯ ಇವೆ. ರಾಜ್ಯದ ಕೆಲವು ಕಡೆ ನಡೆಯುವ ಕೋಮು ಸಂಘರ್ಷ ಗಳಂತೆ ಇಲ್ಲಿನ ಭಾವೈಕ್ಯತೆಗೆ ಧಕ್ಕೆ ತರುವಂತಹ ಕೆಲಸವನ್ನು ಯಾರು ಮಾಡಿಲ್ಲ. ಆದರೆ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಇಂದಿಗೂ ಅಸ್ಪೃಶ್ಯತೆಯಿಂದ ಮುಕ್ತಿ ಸಿಕ್ಕಿಲ್ಲ. ಈಗ ಮೊದಲಿನಷ್ಟು ಇಲ್ಲ ಎಂದು ಹೇಳುವವರಿಗೆ ಇಲ್ಲವೇ ಇಲ್ಲ ಎನ್ನುವಷ್ಟು ಧೈರ್ಯ ಬರುವುದಿಲ್ಲ. ಆದರೂ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಕಡಿಮೆ ಇರುವುದನ್ನು ಅಲ್ಲಗಳೆಯು ವಂತಿಲ್ಲ. ಮೇಲ್ವರ್ಗಗಳಿಗೆ ಸೀಮಿತಗೊಳ್ಳುತ್ತಿದ್ದ ಸಾಹಿತ್ಯ ಕ್ಷೇತ್ರವು ಇಂದು ಎಲ್ಲೆ ಮೀರಿ ವಿಸ್ತಾರಗೊಳ್ಳುತ್ತಿದೆ’
-ಪಾಂಗಾಳ ಬಾಬು ಕೊರಗ, ಸಮ್ಮೇಳನಾಧ್ಯಕ್ಷರು