"ಡಿಜಿಟಲ್ನಿಂದ ಯುವಜನತೆಯ ಮೆದುಳಿನ ನಿಯಂತ್ರಣ ಕ್ಷೀಣ"
ಕೋಟದ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ವಿಜಯ ಸಂಕೇಶ್ವರ
ಕೋಟ: ಎಲ್ಲವೂ ಇಂದು ಡಿಜಿಟಲ್ ಆದ ಕಾರಣ ಪುಸತಿಕ ಓದುಗರ ಸಂಖ್ಯೆ ವಿರಳವಾಗಿದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಂದಿನ ಯುವ ಜನಾಂಗಕ್ಕೆ ನೆನಪಿನ ಶಕ್ತಿ ಕಡಿಮೆ ಆಗಿದೆ. ಡಿಜಿಟಲ್ನಿಂದ ಮೆದುಳಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಉದ್ಯಮಿ ವಿಜಯ ಸಂಕೇಶ್ವರ ಹೇಳಿದ್ದಾರೆ.
ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಶನಿವಾರ ಕೋಟದ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಸದ್ಭಾವನಾ 2024ರ ನಾಡು ನುಡಿಗೆ ಭಾವ ನಮನ ಕಾರ್ಯಕ್ರಮದಲ್ಲಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತಿದ್ದರು.
ದೇಶದ 23 ರಾಜ್ಯಗಳಲ್ಲಿ ಗುಟ್ಕಾ ತಂಬಾಕು ನಿಷೇಧ ಮಾಡಿದ್ದರೂ ಕರ್ನಾಟಕದಲ್ಲಿ ಮಾತ್ರ ನಿಷೇಧ ಮಾಡದಿರುವುದು ದುರದೃಷ್ಟಕರ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಯುವ ಜನತೆ ನಿಷೇಧದ ಬಗ್ಗೆ ಅಭಿಯಾನ ಪ್ರಾರಂಭಿಸ ಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಯುವ ಜಾನಂಗದಲ್ಲಿ ಸಾಮರ್ಥ್ಯವಿದೆ. ಅದನ್ನು ಗುರುತಿಸಿಕೊಳ್ಳಬೇಕು. ನಾಳೆಯ ಚಿಂತನೆ, ಯೋಜನೆ ಬಂದಲ್ಲಿ ಮಾತ್ರ ಯಶಸ್ಸು ಕಾಣಬಹುದು ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ದೊಡ್ಡಣ್ಣ ಮಾತನಾಡಿ, ಜಗತ್ತಿನಲ್ಲಿಯೇ ಕನ್ನಡ ಭಾಷೆಗೆ ಶ್ರೇಷ್ಠ ಸ್ಥಾನವಿದೆ. ರನ್ನ, ಪಂಪ, ನೃಪತುಂಗ ರಂತಹ ಅನೇಕ ಕವಿಮಹಾತ್ರಯರು ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ. ಪಂಚ ವರ್ಣ ಸಂಸ್ಥೆಯು ತಾಯಿ ಭಾಷೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜತೆಗೆ ಸಮಾಜಮುಖಿ ಕಾರ್ಯವೇ ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಕಳದ ಸ್ವಚ್ಛ ಬ್ರಿಗೇಡ್ಗೆ ವಿಶೇಷ ಪುರಸ್ಕಾರ, ವಿಶೇಷ ಅಭಿನಂದನೆಯನ್ನು ಬೆಂಗಳೂರು ಯಕ್ಷಕಲಾ ಅಕಾಡೆಮಿ ಮುಖ್ಯಸ್ಥ ಕೃಷ್ಣಮೂರ್ತಿ ತುಂಗ ಸ್ವೀಕರಿಸಿದರು. ಸುಶ್ಮಿತಾ ಕೃಷ್ಣಮೂರ್ತಿ ಸಾಲಿಗ್ರಾಮ, ಪ್ರಜ್ಞಾ ಗೀತಾ ಪೂಜಾರಿ ಹಂದಟ್ಟು ಪ್ರತಿಭಾ ಪುರಸ್ಕಾರ ನೀಡಲಾಯಿತು.
ಉಡುಪಿಯ ಹೊಸಬದುಕು ಆಶ್ರಮಕ್ಕೆ ದಿನಸಿ ಪರಿಕರ, ಅಶಕತ ಅನಾರೋಗ್ಯ ಪೀಡಿತರಿಗೆ, ವಿಶೇಷ ಚೇತನರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ದಿ. ಉದಯ ಪೂಜಾರಿ ಸ್ಮರಣಾರ್ಥ ಸಹಾಯಹಸ್ತ ನೀಡಲಾಯಿತು. ಸ್ಥಳೀಯ ಕನ್ನಡ ಮಾಧ್ಯಮ ಶಾಲೆ ಗಳಿಗೆ ದತ್ತಿನಿಧಿ, ಅಂಗನವಾಡಿ ಶಾಲೆಗಳಿಗೆ ವಿವಿಧ ಪರಿಕರ ಹಸ್ತಾಂತರಿಸಲಾಯಿತು.
ಕಾರ್ಯಕ್ರಮವನ್ನು ಸಮಾಜ ಸೇವಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಸಮಾಜಸೇವಕ ಮುಂಬೈ ಒಎನ್ಜಿಸಿ ನಿವೃತ್ತ ಮಾನೇಜರ್ ಬನ್ನಾಡಿ ನಾರಾಯಣ ಆಚಾರ್ ಶುಭಾ ಶಂಸನೆಗೈದರು. ಅಧ್ಯಕ್ಷತೆಯನ್ನು ಪಂಚವರ್ಣದ ಅಧ್ಯಕ್ಷ ಅಜಿತ್ ಅಚಾರ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸುರೇಶ್ ಪ್ರಭು, ಮುಂಬೈ ಸಮಾಜ ಸೇವಕ ಬಡಾಮನೆ ರತ್ನಾಕರ್ ಶೆಟ್ಟಿ, ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಡಾ.ಬಿ.ರಾಘವೇಂದ್ರ ಶೆಟ್ಟಿ, ಯಡಾಡಿ ಮತ್ಯಾಡಿಯ ಸುಜ್ಞಾನ ಏಜುಕೇಶನ್ ಟ್ರಸ್ಟ್ ಮುಖ್ಯಸ್ಥ ರಮೇಶ್ ಶೆಟ್ಟಿ, ಮಣಿಪಾಲ ಸೃಷ್ಠಿ ಇಂಜಿನಿಯರ್ನ ಜಯರಾಜ್ ವಿ.ಶೆಟ್ಟಿ, ಬೆಂಗಳೂರು ಉದ್ಯಮಿ ಕರುಣಾಕರ ಖಲಾಸೆ, ಸಾಂಸ್ಕ್ರತಿಕ ಚಿಂತಕ ಋಷಿರಾಜ್ ಸಾಸ್ತಾನ, ಪಾಂಡೇಶ್ವರ ರಕೆತೀಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ.ರಮೇಶ್ ರಾವ್, ಪಂಚವರ್ಣ ಗೌರವಾಧ್ಯಕ್ಷ ಸತೀಶ್ ಎಚ್.ಕುಂದರ್, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಗೌರವಾಧ್ಯಕ್ಷೆ ಕುಸುಮ ದೇವಾಡಿಗ, ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಉಪಸ್ಥಿತರಿದ್ದರು.
ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು. ಶಿಕ್ಷಕರಾದ ಸತೀಶ್ಚಂದ್ರ ಶೆಟ್ಟಿ, ಸಂತೋಷ್ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿ ದರು. ಪಂಚವರ್ಣದ ಕಾರ್ಯದರ್ಶಿ ಸುಧೀಂದ್ರ ಜೋಗಿ ವಂದಿಸಿದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸಹರಿಸಿದರು.
ಕೋಟತಟ್ಟು, ಮಣೂರು, ಕಾಸನಗುಂದು ಅಂಗನವಾಡಿ ಪುಟಾಣಿಗಳಿಂದ ನೃತ್ಯ ಸಿಂಚನ, ಪಂಚವರ್ಣ ಮಹಿಳಾ ಮಂಡಲ ಮಹಿಳೆಯರಿಂದ ಹಾಗೂ ಕುಂಭಾಶಿಯ ಮಯೂರಿ ನೃತ್ಯ ತಂಡದಿಂದ ಸಾಂಸ್ಕೃತಿಕ ಕಲರವ, ಪಿಂಗಾರ್ ಕಲಾವಿದರ್ ಬಿದ್ರೆ ಇವರಿಂದ ಕದಂಬ ನಾಟಕ ಪ್ರದರ್ಶನ ನಡೆಯಿತು.