ತಂತ್ರಜ್ಞಾನಕ್ಕೆ ಒತ್ತು ನೀಡಿ; ಮುಂದೂಡಿಕೆ ಕಡಿಮೆ ಮಾಡಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನ್ಯಾ.ಅರವಿಂದ ಕುಮಾರ್ ಸಲಹೆ
ಉಡುಪಿ ಕೋರ್ಟ್, ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವಕ್ಕೆ ಚಾಲನೆ
ಉಡುಪಿ, ನ.17: ದೇಶದ ನ್ಯಾಯಾಂಗ ವ್ಯವಸ್ಥೆ ಆಧುನಿಕ ತಂತ್ರಜ್ಞಾನವನ್ನು ಹೆಚ್ಚೆಚ್ಚು ಬಳಸುವಂತೆ ಹಾಗೂ ಪ್ರಕರಣದ ವಿಚಾರಣೆ ಯನ್ನು ಮುಂದೂಡುವ ಪ್ರವೃತ್ತಿಯನ್ನು ಸಾದ್ಯವಿದ್ದಷ್ಟು ಕಡಿಮೆಗೊಳಿಸುವಂತೆ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಜಸ್ಟಿಸ್ ಅರವಿಂದ್ ಕುಮಾರ್ ಸಲಹೆ ನೀಡಿದ್ದಾರೆ.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಡುಪಿ ನ್ಯಾಯಾಲಯ ಹಾಗೂ ವಕೀಲರ ಸಂಘದ 125ನೇ ವರ್ಷದ ಶತಮಾ ನೋತ್ತರ ರಜತ ಮಹೋತ್ಸವ ಸಂಭ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೋರ್ಟ್ಗಳಲ್ಲಿ ವರ್ಚುವಲ್ನಂಥ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿದರೆ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲು ಸಾಧ್ಯವಾಗುತ್ತದೆ. ಕೋರ್ಟ್ ಕಲಾಪಗಳ ನೇರ ಪ್ರಸಾರವೂ ಈ ನಿಟ್ಟಿನಲ್ಲಿ ಹೆಚ್ಚು ಉಪಯುಕ್ತ ವೆನಿಸಿಕೊಳ್ಳಲಿದೆ ಎಂದು ಜ.ಅರವಿಂದ ಕುಮಾರ್ ಅಭಿಪ್ರಾಯಪಟ್ಟರು.
ದೇಶಾದ್ಯಂತ ಕೋರ್ಟುಗಳಲ್ಲಿ ಅಪಾರ ಪ್ರಮಾಣದಲ್ಲಿ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇವುಗಳಲ್ಲಿ ಮೋಟಾರು ವೆಹಿಕಲ್, ಬ್ಯಾಂಕಿಗೆ ಸಂಬಂಧಿಸಿರುವ ಸಣ್ಣಪುಟ್ಟ ಕೇಸುಗಳನ್ನು ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಅಥವಾ ಲೋಕ ಅದಾಲತ್ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದೂ ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳೂ, ಪ್ರಸ್ತುತ ಆಂಧ್ರಪ್ರದೇಶದ ರಾಜ್ಯಪಾಲರೂ ಆಗಿರುವ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಮಾತನಾಡಿ, ಜಿಲ್ಲಾ ನ್ಯಾಯಾಲಯಗಳು ತಳಮಟ್ಟದಲ್ಲಿ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಬೆನ್ನಲುಬಾಗಿವೆ. ನ್ಯಾಯದಾನವು ಎಲ್ಲರಿಗೂ ಸಮಾನವಾಗಿ ದೊರಕುವಂತೆ ಇವು ನೋಡಿಕೊಳ್ಳುತ್ತವೆ ಎಂದರು.
ತಳಮಟ್ಟದ ಈ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲು ಈ ನ್ಯಾಯಾಲಯಗಳಲ್ಲಿರುವ ಖಾಲಿ ಹುದ್ದೆ ತುಂಬುವ, ಮೂಲಭೂತ ಸೌಕರ್ಯ ಒದಗಿಸುವ ಹಾಗೂ ಸಂಬಂಧಿತರಿಗೆ ತರಬೇತಿ ನೀಡುವ ಮೂಲಕ ಅವು ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶದ ಜಿಲ್ಲಾ ನ್ಯಾಯಾಲಯಗಳು ಪ್ರತಿದಿನ 1.13ಮಿಲಿಯನ್ ಪ್ರಕರಣ ಗಳನ್ನು ನಿಭಾಯಿಸುತ್ತಿವೆ. ಈ ಮೂಲಕ ಇದು ಎಲ್ಲರಿಗೂ ಸುಲಭದಲ್ಲಿ ಕೈಗೆಟಕುವ ನ್ಯಾಯವ್ಯವಸ್ಥೆ ಎನಿಸಿದೆ. ಸಾಂಕ್ರಾಮಿಕದ ಸಂದರ್ಭದಲ್ಲೂ ಈ ನ್ಯಾಯಾಲಯಗಳು ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿವೆ. ಈ ಮೂಲಕ ಸಕಾಲದಲ್ಲಿ ಜನರಿಗೆ ನ್ಯಾಯವನ್ನು ದೊರಕಿಸಿಕೊಟ್ಟಿದೆ ಎಂದು ಜ.ಅಬ್ದುಲ್ ನಝೀರ್ ಪ್ರಶಂಸಿಸಿದರು.
ಈ ದೇಶದ ನ್ಯಾಯಾಲಯಗಳಲ್ಲಿ ಅಂದಾಜು ಐದು ಕೋಟಿ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. 5ಕೋಟಿ ಕೇಸು ಎಂದರೆ ಅದರ ಪರಿಣಾಮವನ್ನು ಕನಿಷ್ಠ 25 ಕೋಟಿ ಜನರು ಅನುಭವಿಸುತ್ತಾರೆ. ಈ 25 ಕೋಟಿ ಮನೆಗಳಲ್ಲಿ ಶಾಂತಿ ಎಂಬುದೇ ಇಲ್ಲವಾಗುತ್ತದೆ. ಇದೊಂದು ಕ್ಯಾನ್ಸರ್ನಂಥ ಕಾಯಿಲೆ ಯಿಂದ ನರಳುವ ಸನ್ನಿವೇಶ ಎಂದವರು ಖೇಧ ವ್ಯಕ್ತಪಡಿಸಿದರು.
ಇದು ದೇಶವನ್ನು ಕಾಡುವ ಗಂಭೀರ ಸಮಸ್ಯೆ. ನಮ್ಮ ಹೈಕೋರ್ಟ್ನಲ್ಲೂ 3 ಲಕ್ಷ ಕೇಸುಗಳಿವೆ. ಇದು 30 ಲಕ್ಷ ಜನರನ್ನು ಬಾಧಿಸುತ್ತಿದೆ. ಇದರ ಅರ್ಥ ಈ ಕುಟುಂಬಗಳು ಗಂಭೀರ ಕಾಯಿಲೆಯಿಂದ ನರಳುತ್ತಿವೆ ಎಂಬುದು. ಈ ಸಮಸ್ಯೆಗೆ ರಾಜ್ಯ ಸರಕಾರ, ಹೈಕೋರ್ಟ್, ಟ್ರಯಲ್ ಕೋರ್ಟ್ಗಳು, ನಾವೆಲ್ಲ ಸೇರಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ.ಎನ್.ವಿ ಅಂಜಾ ರಿಯಾ ಮಾತನಾಡಿ, ಉಡುಪಿ ಪ್ರಕರಣದ ಕುರಿತು ಸುಧೀರ್ಘ ಡ್ರಾಪ್ಟ್ ಬರೆಯುವುದಕ್ಕೆ ಖ್ಯಾತಿ ಪಡೆದಿದೆ. ಇದನ್ನು ಬಿಟ್ಟು ವಿವರವಾದ ಡ್ರಾಪ್ಟ್ಗಳನ್ನು ಬರೆಯಿರಿ ಎಂದು ಕಿವಿಮಾತು ಹೇಳಿದರು.
ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ರಾಜ್ಯ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ರಾಜ್ಯ ದಲ್ಲಿ ಸರಕಾರವು ಸಮಾಜದ ದುರ್ಬಲ ವರ್ಗ, ಮಹಿಳೆಯರು , ಮಕ್ಕಳು ಹಾಗೂ ದಲಿತರಿಗೆ ಅವರ ಹಕ್ಕನ್ನು ಪಡೆಯಲು ಆದ್ಯತೆ ನೀಡಿದೆ ಎಂದರು.
ಹೈಕೋರ್ಟ್ ನ್ಯಾಯಾಧೀಶ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ. ಇ.ಎಸ್. ಇಂದಿರೇಶ್, ಈ ಸಂದರ್ಭದಲ್ಲಿ ಹೊರತರಲಾದ 125 ರ ಸಂಭ್ರಮದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಕರ್ನಾಟಕ ಸರಕಾರದ ಅಡ್ವೋಕೇಟ್ ಜನರಲ್ ಶಶಿಕಿರಣ್ ಎಸ್. ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಹೈಕೋರ್ಟ್ನ ನ್ಯಾಯಾಧೀಶರಾದ ನ್ಯಾ.ಎಂ.ಜಿ.ಉಮಾ, ನ್ಯಾ.ರಾಮಚಂದ್ರ ಹುದ್ದಾರ್, ನ್ಯಾ.ವೆಂಕಟೇಶ್ ನಾಯ್ಕ್ ಟಿ., ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಮಾಹೆ ವಿವಿಯ ಸಹಕುಲಪತಿ ಡಾ.ಹೆಚ್.ಎಸ್.ಬಲ್ಲಾಳ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸುಪ್ರೀಂ ಕೋರ್ಟ್, ಹೈಕೋರ್ಟ್ಗಳ ಎಲ್ಲಾ ನ್ಯಾಯಾಧೀಶರುಗಳನ್ನು ವಕೀಲರ ಸಂಘ ಹಾಗೂ ಜಿಲ್ಲಾ ನ್ಯಾಯಾಲಯಗಳ ವತಿಯಿಂದ ಸನ್ಮಾನಿಸಲಾಯಿತು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಉಡುಪಿ ವಕೀಲರ ಸಂಘದ ಸದಸ್ಯರಿಗೆ ನೀಡಲಾಗುವ ವಿಶಿಷ್ಟ ಆರೋಗ್ಯ ಕಾರ್ಡನ್ನು ಕರ್ನಾಟಕ ಉಚ್ಛ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನ್ಯಾ. ಎಸ್.ವಿ. ಅಂಜಾರಿಯಾ ಬಿಡುಗಡೆಗೊಳಿಸಿದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಶತಮಾನೋತ್ಸವ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿ ಮೇರಿ ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು.