ನಕಲಿ ಪರಶುರಾಮ ಮೂರ್ತಿ ಪ್ರಕರಣ: ಆರೋಪಿ ಕೃಷ್ಣ ನಾಯ್ಕಗೆ ನ್ಯಾಯಾಂಗ ಬಂಧನ
ಕೃಷ್ಣ ನಾಯ್ಕ
ಕಾರ್ಕಳ, ನ.17: ಕಾರ್ಕಳ ಬೈಲೂರಿನ ಪರಶುರಾಮ್ ಥೀಮ್ ಪಾರ್ಕ್ನಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚಿಸಿರುವ ಪ್ರಕರಣದ ಆರೋಪಿ ಬೆಂಗಳೂರಿನ ಶಿಲ್ಪಿ ಕೃಷ್ಣ ನಾಯ್ಕ(45)ನನ್ನು ಕಾರ್ಕಳ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಆರೋಪಿ ಕೃಷ್ಣ ನಾಯ್ಕ್ನನ್ನು ನ.10ರಂದು ಪುದುಚೆರಿ ಮಾಹೆ ಎಂಬಲ್ಲಿ ಬಂಧಿಸಿದ್ದ ಪೊಲೀಸರು ನ.11ರಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ.16ರವರೆಗೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಕೊಂಡಿದ್ದರು. ಬಳಿಕ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ನೇತೃತ್ವದಲ್ಲಿ ಆರೋಪಿ ಯನ್ನು ತೀವ್ರ ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ವಿಚಾರಣೆ ಪೂರ್ಣಗೊಳಿಸಿರುವ ಪೊಲೀಸರು ಆರೋಪಿಯನ್ನು ಅವಧಿಗೆ ಮೊದಲೇ ಅಂದರೆ ನ.15ರಂದು ಕಾರ್ಕಳ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನ.28ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಕೃಷ್ಣ ನಾಯ್ಕ್ ಥೀಮ್ ಪಾರ್ಕ್ನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂ. ಹಣ ಪಡೆದು, ಬಳಿಕ ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.