ಕನಕದಾಸರ ಹಾಡುಗಳ ಬಗ್ಗೆ ಅಧ್ಯಯನ ಅಗತ್ಯ: ಪುತ್ತಿಗೆ ಶ್ರೀ
ಉಡುಪಿ: ಕನಕದಾಸರ ಭಕ್ತಿ ದೇವರಿಗೂ ಬಹಳ ಪ್ರಿಯವಾಗಿದೆ. ಅಂತಹ ಭಕ್ತಿಯನ್ನು ಸಂಪಾದನೆ ಮಾಡುವ ಕಾರ್ಯ ನಾವೆಲ್ಲ ಮಾಡ ಬೇಕಾಗಿದೆ. ನೇರಾನುಡಿಯ ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಕೆಲವೊಂದು ವಿಚಾರಗಳನ್ನು ಮಾರ್ಮಿಕವಾಗಿ ನುಡಿದ್ದಾರೆ. ತತ್ವಜ್ಞಾನಿಯಾಗಿ ರುವ ಕನಕದಾಸರ ಹಾಡುಗಳ ಬಗ್ಗೆ ಅಧ್ಯಯನ ಮಾಡುವ ಸಂಕಲ್ಪ ಮಾಡ ಬೇಕು ಎಂದು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಶ್ರೀಕನಕದಾಸ ಸಮಾಜ ಸೇವಾ ಸಂಘದ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸೋಮವಾರ ಆಯೋಜಿಸಲಾದ ೫೩೭ನೇ ಶ್ರೀಕನಕದಾಸ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ವಿದ್ವಾನ್ ಗೋಪಾಲಾಚಾರ್ಯ ಅವರಿಗೆ ಭಕ್ತ ಕನಕ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹನುಮಂತ ಎಸ್.ಡೊಳ್ಳಿನ ವಹಿಸಿದ್ದರು. ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಪುತ್ತಿಗೆ ಕಿರಿಯ ಯತಿ ಶ್ರೀಸುಶೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಉಡುಪಿ ಜಿಲ್ಲಾ ಭಾರತ್ ಸ್ಕೌಟ್ಸ್ ಆಯುಕ್ತ ಜನಾರ್ದನ ಕೊಡವೂರು, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವಾನಂದ ರರ್ಝೇರಿ, ಸದ್ಭಾವನ ಜ್ಯೋತಿ ಸಮಿತಿಯ ರಾಜ್ಯಾಧ್ಯಕ್ಷ ಓಂ.ಶ್ರೀಕೃಷ್ಣಮೂರ್ತಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಶ್ರೀಕಾಂತ ನಾಯಕ್, ಕನಕದಾಸ ಸಮಾಜ ಸೇವಾ ಸಂಘದ ಸಿದ್ಧರಾಜು ಕೆ.ಎಸ್., ಮಾಜಿ ಸೈನಿಕ ವಗನೇಪ್ಪ ಯಳಮೇಲಿ, ವಾಗ್ಮಿ ಪ್ರವೀಣ ಯಮನಪ್ಪ ಬೆನಕನವಾರಿ ಮುಖ್ಯ ಅತಿಥಿಗಳಾಗಿದ್ದರು.
ಉಡುಪಿ ಜಿಲ್ಲಾ ಶ್ರೀಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯಾಧ್ಯಕ್ಷ ಹನುಮಂತ ಆಡಿನ ವಂದಿಸಿದರು. ಇದಕ್ಕೂ ಮುನ್ನಾ ನಗರದ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದ ಕನಕದಾಸ ಮಂದಿರದವರೆಗೆ ೩೫೧ ಕುಂಭ ಕಳಸ ಮೆರವಣಿಗೆ ನಡೆಯಿತು.