ಕನಕದಾಸರ ಸಂದೇಶಗಳು ಸರ್ವವ್ಯಾಪ್ತಿ: ಸಂಸದ ಕೋಟ
ಉಡುಪಿ, ನ.18: ಕನಕದಾಸರು ತಮ್ಮ ಮಾತು ಹಾಗೂ ಸಂಗೀತದ ಮೂಲಕ ಜನರನ್ನು ಜಾಗೃತಿಗೊಳಿಸುವುದರ ಜೊತೆಗೆ ಅಸಮಾನತೆ ಭಾವವನ್ನು ದೂರಗೊಳಿಸಿ ಸುಂದರ ಸಮಾಜ ನಿಮಾರ್ಣಗೊಳ್ಳುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾರೆ. ಕನಕದಾಸರ ಸಂದೇಶ ಸರ್ವವ್ಯಾಪ್ತಿ ಹಾಗೂ ಸರ್ವ ಸ್ಪರ್ಶಿಯಾಗಿ ನಿತ್ಯ ಸಮಾಜ ಕಟ್ಟಬಲ್ಲ ಸಂದೇಶ ವಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸೋಮವಾರ ನಗರದ ಅಜ್ಜರಕಾಡಿನನ ಭುಜಂಗ ಪಾರ್ಕ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ ಹಾಗೂ ಹಾಲುಮತ ಮಹಾಸಭಾ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಡುಪಿ ಮತ್ತು ಕನಕನಿಗೆ ಬಹು ದೊಡ್ಡ ಭಾವನಾತ್ಮಕ ಸಂಬಂಧವಿದ್ದು, ದೇವರು ಮತ್ತು ಭಕ್ತನ ನಡುವೆ ಅಸಮಾನತೆಗೆ ಯಾವುದೇ ಸ್ಥಾನವಿಲ್ಲ, ಅಲ್ಲಿ ಭಕ್ತಿಯೇ ಪ್ರಧಾನವಾಗಿರುತ್ತದೆ ಎಂಬುದನ್ನು ಶ್ರೀಕೃಷ್ಣ, ಕನಕನ ಮೂಲಕ ಜಗತ್ತಿಗೇ ಸಾರಿದ್ದಾನೆ ಎಂಬುದು ಕನಕನ ಕಿಂಡಿಯ ವಿಶೇಷತೆಯಾಗಿದೆ ಎಂದವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ದೇಶ ಕಂಡ ಶ್ರೇಷ್ಠ ಸಂತರಲ್ಲಿ ಕನಕದಾ ಸರು ಒಬ್ಬರು. ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕೀರ್ತನೆಗಳ ಮೂಲಕ ದೇವರನ್ನು ಕಾಣಲು ಸಾಧ್ಯ ಎಂಬು ದನ್ನು ತೋರಿಸಿಕೊಟ್ಟಿದ್ದಾರೆ. ಅವರಿಂದಾಗಿ ಉಡುಪಿಯ ಕನಕನ ಕಿಂಡಿ ಇಂದಿಗೂ ವಿಶ್ವ ಪ್ರಸಿದ್ದಿ ಹೊಂದಿದೆ ಎಂದರು.
ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಕನಕನ ಕುರಿತ ವಿಶೇಷ ಉಪನ್ಯಾಸ ದಲ್ಲಿ ಮಾತನಾಡಿ, ಮಾತಿನಿಂದ ಮಾಡಲು ಸಾಧ್ಯವಿಲ್ಲದ ಕೆಲಸವನ್ನು ಸಂಗೀತ ಮಾಡುತ್ತದೆ. ಕನಕದಾಸರು ಹಾಡಿನ ಮೂಲಕ ಸಮಾಜಕ್ಕೆ ಅನೇಕ ಸಂದೇಶಗಳನ್ನು ನೀಡಿದ್ದಾರೆ. ಕನಕದಾಸರ ಕೀರ್ತನೆ ಹಾಗೂ ಮೌಲ್ಯಗಳು ಬದುಕಿಗೆ ದಾರಿ ದೀಪವಾಗಿದ್ದು, ಪ್ರತಿಯೊಬ್ಬರು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ,ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕನಕದಾಸ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತ ಡೊಳ್ಳಿನ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಬಸವರಾಜ್ ವೈ. ಕುರುಬರ, ಹಾಲುಮತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೆಚ್ ಐಹೊಳೆ, ಸಮಾಜದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕಟೀಲು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರದೀಪ್ ಡಿ.ಎಂ. ಹಾವಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.