"ಕಸ್ತೂರಿ ರಂಗನ್ ವರದಿ: ಕೇರಳ ಮಾದರಿ ರೈತರಿಗೆ ರಿಯಾಯಿತಿ ಕೊಡಿ"
ಗ್ರಾಮಸ್ಥರ ಹಿತರಕ್ಷಣಾ ವೇದಿಕೆ ಒತ್ತಾಯ
ಕೊಲ್ಲೂರು: ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶ ಮತ್ತು ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಈ ಪ್ರದೇಶಗಳ ಜನಜೀವ ನಕ್ಕೆ ಮಾರಕ. ಈಗಾಗಾಲೇ ಆರು ಬಾರಿ ನೋಟಿಫಿಕೇಶನ್ ಆಗಿದ್ದು ರಾಜ್ಯ ಸರಕಾರ ಇದನ್ನು ತಿರಸ್ಕರಿಸಿದೆ. ಆದರೆ ಇದು ಸಂತಸದಾಯಕವಲ್ಲ. ಕೇರಳ ಮಾದರಿಯಲ್ಲಿ ಸರಳೀಕರಣ ನೀಡಿದಲ್ಲಿ ಮಾತ್ರ ರೈತಾಪಿ ಜನರಿಗೆ ಅನುಕೂಲವಾಗುತ್ತದೆ ಎಂದು ಪಂಚಾಯತ್ ರಾಜ್ ಒಕ್ಕೂಟಗಳ ಕುಂದಾಪುರ ತಾಲೂಕು ಅಧ್ಯಕ್ಷ ಉದಯಕುಮಾರ ಶೆಟ್ಟಿ ವಂಡ್ಸೆ ಹೇಳಿದ್ದಾರೆ.
ಜಡ್ಕಲ್, ಮುದೂರು ಗ್ರಾಮಸ್ಥರ ಹಿತ ರಕ್ಷಣಾ ಸಮಿತಿ ಮತ್ತು ಬೈಂದೂರು, ಕುಂದಾಪುರ, ಹೆಬ್ರಿ, ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕಿನ ಒಟ್ಟು 70 ಗ್ರಾಮಗಳ ಗ್ರಾಪಂಗಳ ಸಹಯೋಗದೊಂದಿಗೆ ‘ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶ ಮತ್ತು ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ವಿರೋಧಿಸಿ’ ಕೊಲ್ಲೂರು ಪುರಾಣಿಕ ಸಭಾಭವನದಲ್ಲಿ ನ.19ರಂದು ಸಮಾನಮನಸ್ಕರ ಉಪಸ್ಥಿತಿಯಲ್ಲಿ ನಡೆಸಲಾದ ಉಡುಪಿ ಜಿಲ್ಲಾ ಮಟ್ಟದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕಸ್ತೂರಿರಂಗನ್ ವರದಿ ಅಂತಿಮ ನೋಟಿಪಿಕೇಶನ್ ಆಗದಂತೆ ಹೋರಾಟ, ಕಾನೂನು ಹೋರಾಟ ಅಗತ್ಯ. ಇದರೊಂದಿಗೆ ಕಠಿಣವಾಗಿರುವ ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶದ ಬಗ್ಗೆ ಈಗಾಗಲೇ ಒಂದಷ್ಟು ಕಡೆ ನೋಟಿಪಿಕೇಶನ್ ಆಗಿದೆ. ಇದೆರಡರ ಬಗ್ಗೆ ಜನರು ತಿಳಿಯಬೇಕು. ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶವನ್ನು ಯಾವುದೇ ಕಾರಣ ಆಗಲು ಬಿಡಬಾರದು ಎಂದು ಉದಯಕುಮಾರ್ ಶೆಟ್ಟಿ ಹೇಳಿದರು.
ವರದಿ ಹಾಗೂ ನೋಟಿಫಿಕೇಶನ್ ಕುರಿತಂತೆ ಸರ್ವೋಚ್ಚ ನ್ಯಾಯಾಲಯ ದಲ್ಲಿ ಕಾನೂನು ಹೋರಾಟದ ಅಗತ್ಯವಿದೆ. ಎಲ್ಲಾ ಸಂಸದರು ಒಗ್ಗೂಡಬೇಕು. ರಾಜಕೀಯ, ಪಕ್ಷ ಎಂಬುದನ್ನು ಬಿಡಬೇಕು. ಸೂಕ್ತ ಮಾರ್ಗದಲ್ಲಿ ಹೋರಾಡಿ ದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೂ ಅಸಾಧ್ಯವಲ್ಲ. ಕಾನೂನುಬದ್ಧ ಹೋರಾಟ ಮಾಡಿದರೆ ಜಯ ಸಿಗಲಿದೆ. ಸರಕಾರದ ಒಪ್ಪಿಗೆಯಿಲ್ಲದೆ ವರದಿ ಅನುಷ್ಟಾನ ಅಸಾಧ್ಯ. ಮುಖ್ಯಮಂತ್ರಿಗಳು, ಸಂಬಂಧಪಟ್ಟ ಮಂತ್ರಿಗಳು, ಸಂಸದರು, ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡುವ ಜೊತೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೂ ಚಿಂತನೆ ನಡೆಸಿದ್ದೇವೆ ಎಂದರು.
ಮುಖಂಡ ಪ್ರಭಾಕರ ಶೆಟ್ಟಿ ಜಡ್ಕಲ್ ಮಾತನಾಡಿ, ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಗಾಗಲೇ ಎರಡು ಗ್ರಾಮಗಳ ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟಿಸಿದ್ದಾರೆ. ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿ ಸರಕಾರದ ಗಮನ ಸೆಳೆಯಲಾಗಿದೆ. 35 ಗ್ರಾಮಗಳನ್ನು ಒಗ್ಗೂಡಿಸಿ ಕೊಂಡು ಮುಂದಿನ ಹೋರಾಟದ ರೂಪುರೇಷೆಗಳು ಸಿದ್ದಗೊಳಿಸಲಾಗುತ್ತದೆ ಎಂದರು.
ಜಡ್ಕಲ್ ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಅಧ್ಯಕ್ಷತೆ ವಹಿಸಿದ್ದರು. ಮನೋಜ್ ಕಡಬ ಮಾಹಿತಿ ನೀಡಿದರು. ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ತೆಗ್ಗರ್ಸೆ, ಸದಸ್ಯ ರಘುರಾಮ ದೇವಾಡಿಗ, ಮಾಜಿ ಸದಸ್ಯ ಡಾ. ಅತುಲ್ ಕುಮಾರ್ ಶೆಟ್ಟಿ, ದಸಂಸ ಮುಖಂಡ ವಾಸುದೇವ ಮುದೂರು, ಕೊಲ್ಲೂರು ಗ್ರಾಪಂ ಪ್ರಭಾರ ಅಧ್ಯಕ್ಷ ನಾಗೇಶ ಪೂಜಾರಿ, ಜಡ್ಕಲ್ ಗ್ರಾಪಂ ಸದಸ್ಯರಾದ ದೇವದಾಸ್ ವಿ.ಜೆ., ಲಕ್ಷ್ಮಣ ಶೆಟ್ಟಿ, ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.