ಶಾಲಾ ಪಠ್ಯಪುಸ್ತಕದಲ್ಲಿ ಸಹಕಾರ ಕ್ಷೇತ್ರದ ಪಾಠವನ್ನು ಸೇರಿಸಿ: ಎಂ.ಎನ್.ರಾಜೇಂದ್ರ ಕುಮಾರ್ ಮನವಿ
ಉಡುಪಿ, ನ.20: ರಾಜ್ಯ ಶಿಕ್ಷಣ ಇಲಾಖೆ ಶಾಲಾ ಪಠ್ಯಪುಸ್ತಕದಲ್ಲಿ ಸಹಕಾರ ಕ್ಷೇತ್ರದ ಕುರಿತಂತೆ ಪಾಠವನ್ನು ಮುಂದಿನ ವರ್ಷದಲ್ಲಾದರೂ ಸೇರಿಸುವ ಕುರಿತಂತೆ ಚಿಂತನೆ ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರ ಇಲಾಖೆ ಉಡುಪಿ ಜಿಲ್ಲೆ ಹಾಗೂ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸೇರಿದಂತೆ ಉಡುಪಿಯ ವಿವಿಧ ಕೋಆಪರೇಟಿವ್ ಸೊಸೈಟಿ ಗಳ ಸಹಯೋಗದಲ್ಲಿ ಕಳೆದೊಂದು ವಾರದಿಂದ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾ ರೋಪ ಸಮಾರಂಭವನ್ನು ಇಂದು ಉಡುಪಿ ಅಜ್ರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ಇಂದಿನ ಘೋಷಣೆಯಾಗಿರುವ ‘ವಿಕಸಿತ ಭಾರತ’. ಈ ದೇಶ ಅಭಿವೃದ್ಧಿ ಸಹಕಾರಿ ಕ್ಷೇತ್ರದಿಂದ ಮಾತ್ರ ಸಾಧ್ಯ. ದೇಶದ ಒಟ್ಟು ಜನಸಂಖ್ಯೆ 140 ಕೋಟಿಯಲ್ಲಿ 32 ಕೋಟಿ ಜನರು ಇಂದು ಸಹಕಾರಿ ಕ್ಷೇತ್ರದಲ್ಲಿದ್ದಾರೆ. ಸಹಕಾರಿ ಕ್ಷೇತ್ರದಿಂದ ಮಾತ್ರ ದೇಶದ ಏಳಿಗೆ ಸಾಧ್ಯ ಎಂಬುದನ್ನು ಎಲ್ಲರೂ ಅರಿತುಕೊಂಡಿದ್ದಾರೆ ಎಂದವರು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಹುಟ್ಟಿಕೊಂಡ ವಾಣಿಜ್ಯ ಬ್ಯಾಂಕ್ಗಳಿಗೆ ಹೋಲಿಸಿದರೆ ದೇಶದಲ್ಲಿ ಸಹಕಾರಿ ಕ್ಷೇತ್ರ ಕ್ಕಿಂದು 120 ವರ್ಷ ತುಂಬುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಹುಟ್ಟಿಕೊಂಡ ಸಹಕಾರಿ ಚಳವಳಿಯ ಮಹತ್ವವನ್ನು ಬ್ರಿಟಿಷರೂ ಅರಿತುಕೊಂಡಿದ್ದರು. ದೇಶದ ಇಂದಿನ 32 ಕೋಟಿ ಜನತೆಯೂ ಇದನ್ನು ಅರಿತಿದೆ ಎಂದು ಎಂಎನ್ಆರ್ ಹೆಮ್ಮೆಯಿಂದ ತಿಳಿಸಿದರು.
ಕೇಂದ್ರ ಸರಕಾರ ನಬಾರ್ಡ್ ಮೂಲಕ ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ ಪ್ರಮಾಣವನ್ನು ಶೇ.58ರಷ್ಟು ಕಡಿತ ಗೊಳಿಸಲು ನಿರ್ಧರಿಸಿ ರುವುದನ್ನು ಟೀಕಿಸಿದ ರಾಜೇಂದ್ರಕುಮಾರ್, ಸಹಕಾರಿ ಬ್ಯಾಂಕುಗಳು ರೈತರಿಗೆ ನೀಡುವ ಶೂನ್ಯ ಹಾಗೂ ರಿಯಾಯಿತಿ ಬಡ್ಡಿದರದ ಸಾಲವನ್ನು ಮರುಪಾವತಿಗೆ ಸರಕಾರ ಧೀರ್ಘ ಸಮಯ ತೆಗೆದುಕೊಂಡರೂ ಸಹಕಾರಿ ಸಂಘುಗಳು ರೈತರಿಗೆ ತೊಂದರೆಯಾಗದಂತೆ ಸಾಲ ನೀಡುತ್ತಿದೆ ಎಂದರು.
ಕರಾವಳಿಯ ಸಹಕಾರಿ ಕ್ಷೇತ್ರ ಇಡೀ ದೇಶಕ್ಕೆ ಮಾದರಿಯಾಗಿ ಬೆಳೆದಿದೆ. ಕರಾವಳಿಯಲ್ಲಿ ಎಲ್ಲಾ ಸಹಕಾರಿ ಸಂಘಗಳು ಲಾಭದಲ್ಲಿ ನಡೆಯುತಿವೆ. ರೈತರಿಗೆ, ಜನಸಾಮಾನ್ಯರಿಗೆ ಸೇವೆಯ ರೂಪದಲ್ಲಿ ಸಾಲಸೌಲಭ್ಯಗಳನ್ನು ನೀಡುತ್ತಿವೆ. ಆದರೆ ಸರಕಾರ ಮಾತ್ರ ನಮ್ಮತ್ತ ತಲೆ ಎತ್ತಿ ನೋಡುತ್ತಿಲ್ಲ. ಸರಕಾರದ ತನ್ನ ವ್ಯವಹಾರದ ಎಲ್ಲಾ ಖಾತೆಗಳನ್ನು ವಾಣಿಜ್ಯ ಬ್ಯಾಂಕುಗಳಲ್ಲಿ ತೆರೆಯುತ್ತಿದೆಯೇ ಹೊರತು ಯಾವುದೇ ಸಹಕಾರಿ ಬ್ಯಾಂಕ್ಗಳನ್ನು ಪರಿಗಣಿಸುತ್ತಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದರು.
ನಾವು ಸರಕಾರದ ಹಂಗಿನಲ್ಲಿ ಬದುಕುತ್ತಿಲ್ಲ.ಜನರ ಸಹಕಾರ ಹಾಗೂ ಅವರಿಟ್ಟ ವಿಶ್ವಾಸದಿಂದ ನಾವು ಬೆಳೆದು ನಿಂತಿದ್ದೇವೆ. ಕೋಟಿಗಟ್ಟಲೆ ಲಾಭ ಗಳಿಸುತಿದ್ದೇವೆ ಎಂದು ಅವರು, ಸಹಕಾರಿ ಕ್ಷೇತ್ರದ ಈ ಸಾಧನೆಯನ್ನು ಯುವ ಜನಾಂಗಕ್ಕೂ ತಿಳಿಯಲು ಶಾಲಾ ಪಠ್ಯದಲ್ಲಿ ಈ ವಿಷಯವನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಾದರೂ ಸೇರಿಸಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಸಹಕಾರಿ ಕ್ಷೇತ್ರ ಯುವಜನತೆ ಯನ್ನು ತಲುಪಬೇಕಾಗಿದೆ. ಯುವಜನತೆಯನ್ನು ಒಳಗೊಂಡ ಸಹಕಾರಿ ಕ್ಷೇತ್ರ ಇನ್ನಷ್ಟು ಬಲಿಷ್ಠವಾಗಿ ರೂಪುಗೊಳ್ಳಲು ಸಾಧ್ಯ. ಶಾಲಾ-ಕಾಲೇಜು ಮಕ್ಕಳಿಗೆ ಸಹಕಾರಿ ತತ್ವದ ಮಹತ್ವ ತಿಳಿಯಬೇಕು ಎಂದರು.
ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಸೇರಿದ ಇಂದಿನ ಸಮಾರಂಭದಲ್ಲಿ ನಾಡಿನ ಖ್ಯಾತ ಮನೋತಜ್ಞ ಹಾಗೂ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ.ಸಿ.ಆರ್.ಚಂದ್ರಶೇಖರ್ ಅವರು ಸಮಗ್ರ ಆರೋಗ್ಯದ ಕುರಿತಂತೆ ದಿಕ್ಸೂಚಿ ಭಾಷಣ ಮಾಡಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಹೋಮ್ ಗಾರ್ಡ್ ಕಮಾಂಡೆಂಟ್ ಡಾ.ರೋಶನ್ ಶೆಟ್ಟಿ, ಸಹಕಾರ ಸಂಘಗಳ ಉಡುಪಿ ಜಿಲ್ಲಾ ಉಪನಿಬಂಧಕಿ ಕೆ.ಆರ್.ಲಾವಣ್ಯ, ಕುಂದಾಪುರ ವಿಭಾಗದ ಸಹಾಯಕ ನಿಬಂಧಕಿ ಸುಕನ್ಯಾ, ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕಿ ರೇಣುಕಾ ಜಿ. ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪರಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲೆಯ ಸಹಕಾರಿಗಳಾದ ದೇವಿಪ್ರಸಾದ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಹರೀಶ್ ಕಿಣಿ ಅಲೆವೂರು, ಕಟಪಾಡಿ ಶಂಕರ ಪೂಜಾರಿ, ಡಾ.ಶ್ರೀಧರ ಪ್ರಸಾದ್, ಗಂಗಾಧರ ಶೆಟ್ಟಿ ಮಂದಾರ್ತಿ ಯು.ಮೋಹನ ಉಪಾಧ್ಯಾಯ, ಕೆ.ವಾದಿರಾಜ ಭಟ್, ಅನುಷಾ ಕೋಟ್ಯಾನ್, ಜಾರ್ಜ್ ಸ್ಯಾಮುವೆಲ್, ರಾಜೇಶ್ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಈ ಬಾರಿಯ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಕೋರ್ಸ್ನಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.