ಮಣಿಪಾಲ: ವಾಗ್ಶಾದಲ್ಲಿ ಕ್ರಿಸ್ಮಸ್ ಕೇಕ್ಮಿಕ್ಸ್ ಕಾರ್ಯಕ್ರಮ
ಉಡುಪಿ: ಮಣಿಪಾಲದ ವೆಲ್ಕಮ್ ಗ್ರೂಪ್ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ (ವಾಗ್ಶಾ) ತನ್ನ ವಾರ್ಷಿಕ ಕ್ರಿಸ್ಮಸ್ ಕೇಕ್ಗೆ ಹಣ್ಣುಗಳ ಮಿಶ್ರಣ ಸಮಾರಂಭವನ್ನು ಇಂದು ಆಯೋಜಿಸಿತ್ತು. ಈ ಮೂಲಕ ಹಬ್ಬದ ಋತುವಿನ ಆರಂಭಕ್ಕೆ ಮುನ್ನುಡಿ ಬರೆಯಿತು.
ವಾಗ್ಶಾ ವಿದ್ಯಾರ್ಥಿಗಳ ತರಬೇತಿಯ ‘ಲವಣ ರೆಸ್ಟೋರೆಂಟ್’ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಮಾಹೆ ತಂಡ, ಪೈ ಕುಟುಂಬ, ಆಡಳಿತ ಮುಖ್ಯಸ್ಥರು, ಸ್ಥಳೀಯ ಗಣ್ಯರು ಪ್ರತಿವರ್ಷ ಕ್ರಿಸ್ಮಸ್ಗೆ ಒಂದು ತಿಂಗಳು ಮೊದಲೇ ನಡೆಯುವ ಸಾಂಪ್ರದಾಯಿಕ ಕ್ರಿಸ್ಮಸ್ ಕೇಕ್ಮಿಕ್ಸ್ನಲ್ಲಿ ಭಾಗಿಯಾದರು.
ವಾಗ್ಶಾದ ಪ್ರಭಾರಿ ಪ್ರಾಂಶುಪಾಲರಾದ ಡಾ.ಪಿ.ರಾಜಶೇಖರ್ ಅವರು ಕ್ರಿಸ್ಮಸ್ ಕೇಕ್ ಹಣ್ಣು ಮಿಶ್ರಣ ಸಮಾರಂಭದ ಸಂಪ್ರದಾಯವನ್ನು ವಿವರಿಸಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಮಾಹೆಯ ಟ್ರಸ್ಟಿ ವಸಂತಿ ಆರ್. ಪೈ ಅವರು ಸಹ ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಭಾಗವಹಿಸಿದ ಎಲ್ಲರೂ ಬಾಣಸಿಗ ಟೊಪ್ಪಿ ಹಾಗೂ ಆಫ್ರಾನ್ ಧರಿಸಿ ಒಣದ್ರಾಕ್ಷಿ, ಕ್ಯಾಂಡಿಡ್ ಸಿಪ್ಪೆ, ಖರ್ಜೂರ, ಚೆರ್ರಿ ಮತ್ತು ಆರೊಮ್ಯಾಟಿಕ್ ಮಸಾಲೆ ಹಾಗೂ ಡ್ರೈಫ್ರುಟ್ಸ್ಗಳನ್ನು ಮಿಕ್ಸ್ ಮಾಡಿದರು.
ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಮಾಹೆಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್, ಅಲ್ಲದೇ ಮಾಹೆಯ ವಿವಿಧ ಘಟಕಗಳ ಮುಖ್ಯಸ್ಥರು ಉಪಸ್ಥಿತರಿದ್ದರು.