ಪ್ರಧಾನಮಂತ್ರಿ ಫಸಲ್ ಬಿಮಾ ಹಿಂಗಾರು, ಬೇಸಿಗೆ ಹಂಗಾಮು ಯೋಜನೆ
ಸಾಂದರ್ಭಿಕ ಚಿತ್ರ
ಉಡುಪಿ, ನ.22: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಗ್ರಾಪಂ ಮಟ್ಟದಲ್ಲಿ ಹಾಗೂ ಉದ್ದು ಮತ್ತು ನೆಲಗಡಲೆ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಹಿಂಗಾರು ಮತ್ತು ಬೇಸಿಗೆ ಹಂಗಾಮು 2024-25 ಯೋಜನೆಯ ಬೆಳೆವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
ಅಧಿಸೂಚಿತ ಬೆಳೆಗಳ ವಿವರ: ಭತ್ತದ ಬೆಳೆಗೆ ಉಡುಪಿ ಹಾಗೂ ಕಾಪು ತಾಲೂಕಿನ ತಲಾ 2 ಗ್ರಾಪಂ, ಬ್ರಹ್ಮಾವರ ತಾಲೂಕಿನ 7ಗ್ರಾಪಂ, ಕುಂದಾಪುರ ತಾಲೂಕಿನ 13 ಗ್ರಾಪಂ., ಬೈಂದೂರು ತಾಲೂಕಿನ 1 ಗ್ರಾಪಂ, ಕಾರ್ಕಳ ತಾಲೂಕಿನ 19ಗ್ರಾಪಂ ಹಾಗೂ ಹೆಬ್ರಿ ತಾಲೂಕಿನ 3 ಗ್ರಾಪಂಗಳು ಸೇರಿದಂತೆ ಒಟ್ಟು 47 ಗ್ರಾಪಂಗಳನ್ನು ಬೆಳೆ ವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚಿಸಲಾಗಿದೆ. ವಿಮಾ ಮೊತ್ತ ಪ್ರತೀ ಹೆಕ್ಟೇರ್ಗೆ 93,250 ರೂ.ಗೆ, ವಿಮಾ ಕಂತಿನ ದರ ಪ್ರತೀ ಹೆ.ಗೆ 1,398.75 ರೂ.ಗಳಾಗಿದ್ದು, ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನ.
ಮಳೆಯಾಶ್ರಿತ ಉದ್ದು ಬೆಳೆಗೆ ಬ್ರಹ್ಮಾವರ, ಕಾಪು, ಕೋಟ, ಉಡುಪಿ, ಕುಂದಾಪುರ,ಬೈಂದೂರು ಮತ್ತು ವಂಡ್ಸೆ ಸೇರಿದಂತೆ ಒಟ್ಟು 7 ಹೋಬಳಿಗಳನ್ನು ಬೆಳೆವಿಮೆ ಯೋಜನೆಯಡಿ ನೋಂದಣಿಗಾಗಿ ಸೂಚಿಸಲಾಗಿದೆ. ವಿಮಾ ಮೊತ್ತ ಪ್ರತಿ ಹೆ.ಗೆ 32,750 ರೂ., ವಿಮಾ ಕಂತಿನ ದರ 491.25 ರೂ. ಗಳಾಗಿದ್ದು, ನೋಂದಣಿಗೆ ನವೆಂಬರ್ 30 ಕೊನೆಯ ದಿನ.
ಮಳೆಯಾಶ್ರಿತ ನೆಲಗಡಲೆ ಬೆಳೆಗೆ ಕುಂದಾಪುರ, ಬೈಂದೂರು ಹಾಗೂ ಕೋಟ ಸೇರಿದಂತೆ ಒಟ್ಟು 3 ಹೋಬಳಿಗಳನ್ನು ಬೆಳೆವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚಿಸಲಾಗಿದ್ದು, ವಿಮಾ ಮೊತ್ತ ಪ್ರತಿ ಹೆ.ಗೆ 54,500 ರೂ.ಗೆ ವಿಮಾಕಂತಿನ ದರ ಪ್ರತಿ ಹೆ.ಗೆ 817.50 ರೂ.ನಿಗದಿ ಪಡಿಸಲಾಗಿದ್ದು, ನೋಂದಣಿಗೆ ಡಿ.31 ಕೊನೆಯ ದಿನವಾಗಿದೆ.
ರೈತರು ಪಹಣಿ ಪತ್ರ, ಖಾತೆ/ ಪಾಸ್ಪುಸ್ತಕ, ಆಧಾರ್ ಸಂಖ್ಯೆ, ಕಂದಾಯ ರಸೀದಿಗಳನ್ನು ಒದಗಿಸಿ, ಸ್ಥಳೀಯ ಸಾಲ ನೀಡುವ ವಾಣಿಜ್ಯ ಅಥವಾ ಗ್ರಾಮೀಣ ಮಟ್ಟದ ವ್ಯವಸಾಯ ಸೇವಾ ಸಹಕಾರ ಸಂಘಗಳು, ಸಾರ್ವಜನಿಕ ಸೇವಾ ಕೇಂದ್ರ, ಗ್ರಾಮ ಒನ್ ಮತ್ತು ವಿಮಾ ಸಂಸ್ಥೆಗಳನ್ನು ಸಂಪರ್ಕಿಸಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದು.
ಬೆಳೆವಿಮಾ ಯೋಜನೆಯಿಂದ ರೈತರಿಗಾಗುವ ಪ್ರಯೋಜನಗಳು: ಮಳೆ ಅಭಾವ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ರಷ್ಟು ಬಿತ್ತನೆಯಾಗದಿದ್ದಲ್ಲಿ ವಿಮೆ ಮಾಡಿಸಿದ ರೈತರಿಗೆ ವಿಮಾ ಮೊತ್ತದ ಶೇ.25ರಷ್ಟು ಪರಿಹಾರ ನೀಡಲಾಗುವುದು.
ಅಧಿಸೂಚಿತ ಘಟಕದಲ್ಲಿ ಸಂಭವಿಸುವ ಹವಾಮಾನ ವೈಪರಿತ್ಯಗಳಾದ ಹೆಚ್ಚಿನ ಮಳೆ, ನೆರೆ/ ಪ್ರವಾಹದಿಂದ ಬೆಳೆ ಮುಳುಗಡೆ, ದೀರ್ಘ ಕಾಲ ತೇವಾಂಶ ಕೊರತೆ, ತೀವ್ರ ಬರಗಾಲ ಮುಂತಾದವುಗಳಿಂದ ಬಿತ್ತನೆಯಾದ 1 ತಿಂಗಳಿನಿಂದ ಕಟಾವಿನ 15 ದಿನ ಪೂರ್ವದವರೆಗಿನ ಬೆಳೆಯಲ್ಲಿ ಬೆಳೆ ನಷ್ಟವಾಗಿ ನಿರೀಕ್ಷಿತ ಇಳುವರಿ, ಪ್ರಾರಂಭಿಕ ಇಳುವರಿಯ ಶೇ.50ಕ್ಕಿಂತ ಕಡಿಮೆ ಇದ್ದಲ್ಲಿ ಅಥವಾ ಬೆಳೆ ನಷ್ಟ ಕಂಡುಬಂದಲ್ಲಿ ಮುಂಚಿತವಾಗಿ ವಿಮೆ ಮಾಡಿದ ರೈತರಿಗೆ ಶೇ.25ರಷ್ಟು ಬೆಳೆ ನಷ್ಟ್ಟ ಪರಿಹಾರ ದೊರೆಯಲಿದೆ. ಬೆಳೆ ಕಟಾವಿನ ವಾಸ್ತವಿಕ ಇಳುವರಿ ಆಧಾರದ ಮೇಲೆ ಅಂತಿಮ ಬೆಳೆ ನಷ್ಟ ಪರಿಹಾರದಲ್ಲಿ ಹೊಂದಾಣಿಕೆ ಮಾಡಲಾಗುವುದು.
ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ ಹಾಗೂ ಗುಡುಗುಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಬೆಳೆ ಹಾನಿಯಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದ್ದು, ಅಧಿಸೂಚಿಸಿದ ಘಟಕದಲ್ಲಿ ಶೇ.25 ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆ ನಷ್ಟವಾದಲ್ಲಿ ವಿಮೆಗೆ ಒಳಪಟ್ಟ ಬೆಳೆ ನಷ್ಟದ ವರದಿ ಮಾಡಿದ ರೈತರಿಗೆ ಮಾದರಿ ಸಮೀಕ್ಷೆಗೆ ಅನುಗುಣವಾಗಿ ಪರಿಹಾರ ನೀಡಲಾಗುವುದು.
ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (ಕಟಾವು ಮಾಡಿದ 14 ದಿನಗಳ ಒಳಗೆ) ಚಂಡಮಾರುತ, ಅಕಾಲಿಕ ಮಳೆಯಿಂದ ಬೆಳೆ ನಾಶವಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದೆ. ಮೇಲಿನ ಎರಡೂ ಸಂದರ್ಭದಲ್ಲಿ ರೈತರು ವಿಮಾ ಸಂಸ್ಥೆ/ಆರ್ಥಿಕ ಸಂಸ್ಥೆ ಅಥಮಾ ಕೃಷಿ ಇಲಾಖಾ ಕಚೇರಿಗೆ 72 ಗಂಟೆಗಳ ಒಳಗಾಗಿ ಬೆಳೆ ಹಾನಿ ವಿವರದ ಮಾಹಿತಿ ಒದಗಿಸಬೇಕು.
ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಕೊನೆಯ ದಿನಾಂಕದ ಒಂದು ವಾರದ ಮೊದಲು ಈ ಕುರಿತು ಮುಚ್ಚಳಿಕೆ ಪತ್ರ ನೀಡಿ ಬೆಳೆ ವಿಮೆಯಿಂದ ಕೈಬಿಡುವಂತೆ ಕೋರಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕೃಷಿ ಇಲಾಖೆಯ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.