ನಾಡ: ಎಸ್ಸಿ-ಎಸ್ಟಿ ವಿಶೇಷ ಗ್ರಾಮಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ
ಕುಂದಾಪುರ, ನ.26: ಕೊರಗರು-ದಲಿತರಿಗೆ ವಿಶೇಷ ಅನುದಾನಗಳು ಸಿಗುತ್ತವೆ ಎನ್ನುವುದು ಕೇವಲ ಸಭೆಗಳಿಗಷ್ಟೇ ಸೀಮಿತವಾಗಿದೆ. ನಮ್ಮ ಗೋಳಿನ ಬದುಕು ಇನ್ನೂ ಸುಧಾರಿಸಿಲ್ಲ. ಕೆಲ ಇಲಾಖೆಗಳು ನಮ್ಮ ಸಂಕಷ್ಟದ ಬಗ್ಗೆ ಸ್ಪಂದನೆ ನೀಡುವುದಿಲ್ಲ ಎಂದು ನಾಡ ಗ್ರಾಮಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ- ಪ.ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯದವರು ಗಂಭೀರ ಆರೋಪ ಮಾಡಿದರು.
ಎಸ್ಸಿ-ಎಸ್ಟಿ ಗ್ರಾಮ ಸಭೆ ಕಾಟಾಚಾರಕ್ಕೆಂಬಂತೆ ನಡೆಯಬಾರದು. ನಾವು ವಾಸಿಸುವ ಜಾಗಕ್ಕೆ ಸರಿಯಾದ ಹಕ್ಕುಪತ್ರ ನೀಡಿಲ್ಲ. ಇದರಿಂದಾಗಿ ನಮಗೆ ಯಾವುದೇ ಸರಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದಲಿತ ಮಹಿಳೆಯರು ಸಮಸ್ಯೆ ಹೇಳಿಕೊಂಡರು.
ಕೊರಗ ಸಂಘಟನೆ ಮುಖಂಡರಾದ ಸುಶೀಲಾ ನಾಡ ಮಾತನಾಡಿ, ಕೊರಗರು ಕುಳಿತ ಭೂಮಿಗೆ ಹಕ್ಕುಪತ್ರ ನೀಡಿಲ್ಲ. ಆದರೆ ಉಳ್ಳವರು ಕಬ್ಜಾ ಮಾಡಿದ ಜಾಗವನ್ನು ಇಲಾಖೆ ನೋಡಿಯೂ ನೋಡದಂತೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಹಲವಾರು ಅರ್ಜಿಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಎಸ್ಸಿ-ಎಸ್ಟಿ ಸಮುದಾಯದ ಜನರಿಗೆ ಸಮರ್ಪಕ ಮಾಹಿತಿಯನ್ನು ಇಲಾಖಾಧಿಕಾರಿಗಳು ನೀಡಬೇಕು ಎಂದರು.
ಕೊರಗ ಮುಖಂಡ ಶ್ರೀಧರ ನಾಡ ಮಾತನಾಡಿ, ಒಂದು ವರ್ಷದ ಹಿಂದೆ ಪ್ರತಿಭಟನಾ ಸಭೆ ನಡೆಸಿದಾಗ ಕೊರಗ ಸಮುದಾಯದ ಸರ್ವೆ ಹಾಗೂ ಭೂರಹಿತರ ಬಗ್ಗೆ ಸಂಬಂದಪಟ್ಟ ಇಲಾಖೆಗಳ ಜಂಟಿ ಸರ್ವೆ ನಡೆಸುವಂತೆ ಅಂದಿನ ಅಧಿಕಾರಿಗಳು ತಿಳಿಸಿದ್ದು ಈವರೆಗೆ ನಡೆದ ಪ್ರಗತಿಯ ಬಗ್ಗೆ ಮಾಹಿತಿ ನೀಡಲು ಆಗ್ರಹಿಸಿದರು.
ಸಭೆಯ ಮೊದಲಿಗೆ ಗ್ರಾ.ಪಂ ಸದಸ್ಯರು ವೇದಿಕೆಯಲ್ಲಿ ಅನುಪಸ್ಥಿತಿಯಿದ್ದ ಬಗ್ಗೆ ಸ್ಥಳೀಯ ಮುಖಂಡ ರಮೇಶ್ ಅಸಮಾಧಾನ ಹೊರಹಾಕಿ ಸಭೆ ಮುಂದೂಡುವಂತೆ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಗ್ರಾಪಂ ಸದಸ್ಯರುಗಳು ವೇದಿಕೆಗೆ ಆಗಮಿಸಿದರು. ಬಳಿಕವಷ್ಟೇ ಸಭೆಯನ್ನು ಆರಂಭಗೊಳಿಸಲಾಯಿತು. ನಾಡ ಗ್ರಾ.ಪಂ ವ್ಯಾಪ್ತಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಸುರೇಶ್ ಸಭೆಯಲ್ಲಿ ಆಗ್ರಹಿಸಿದರು.
ನಾಡ ಗ್ರಾಪಂ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷೆ ಮಮತಾ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷ ಪ್ರತ್ವೀಶ್ ಕುಮಾರ್ ಶೆಟ್ಟಿ, ಸದಸ್ಯರುಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹರೀಶ್ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.