ಕಾಂಗ್ರೆಸ್‌ನಿಂದ ಸಂವಿಧಾನಕ್ಕೆ ನಿರಂತರ ಅಪಚಾರ: ಎನ್.ಮಹೇಶ್ ಆರೋಪ
ಉಡುಪಿ, ನ.26: ಮಹಿಳಾ ಸಮಾನತೆ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರರ ಮಹತ್ವಾಕಾಂಕ್ಷಿ ಹಿಂದೂ ಕೋಡ್ ಬಿಲ್ ಜಾರಿಗೆ ಅವಕಾಶ ನಿರಾಕರಿಸಿದ ಕಾಂಗ್ರೆಸ್ ಮಹಿಳೆಯರು, ದೇಶ ಹಾಗೂ ಸಂವಿಧಾನಕ್ಕೆ ಮೊದಲ ಅಪಚಾರ ಮಾಡಿತ್ತು ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದ್ದಾರೆ.
ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ವತಿಯಿಂದ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್ ಸಭಾಂಗಣದಲ್ಲಿ ಮಂಗಳವಾರ ಸಂವಿಧಾನ ದಿನದ ಅಂಗವಾಗಿ ನ.26ರಿಂದ 2025ರ ಜನವರಿ 26ರವರೆಗೆ ಹಮ್ಮಿಕೊಳ್ಳಲಾಗಿ ರುವ ಸಂವಿಧಾನ ಸಮ್ಮಾನ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿಂದೂ, ಮುಸ್ಲಿಂ, ಕ್ರೈಸ್ತರಿಗೆ ಬೇರೆ ಬೇರೆ ಧರ್ಮ ಗ್ರಂಥಗಳಿದ್ದರೂ ಭಾರತೀಯರಿಗೆ ಸಂವಿಧಾನವೇ ಆಡಳಿತ ವ್ಯವಸ್ಥೆಯ ಧರ್ಮಗ್ರಂಥ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ, ಮೀಸಲು ವ್ಯವಸ್ಥೆ ಕಿತ್ತು ಹಾಕುತ್ತದೆನ್ನುವ ಹಸಿ ಹಸಿ ಸುಳ್ಳಿನ ವಿರುದ್ಧ ಎರಡು ತಿಂಗಳ ಕಾಲ ರಾಜ್ಯ, ದೇಶದ ಜನರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂವಿಧಾನ ರಚನಾ ಸಮಿತಿ ಸಭೆಗೆ ಹೋಗದಂತೆ ಡಾ.ಅಂಬೇಡ್ಕರರನ್ನು ಹೆಜ್ಜೆ ಹೆಜ್ಜೆಗೂ ತಡೆದ ಕಾಂಗ್ರೆಸಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದ ಅವರು, ಮೂರು ದಶಕಗಳ ಕಾಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವನ್ನು ಅಭಿವೃದ್ಧಿ ಹಾದಿಯಲ್ಲಿ ಪಂಚವಾರ್ಷಿಕ ಯೋಜನೆ ಗಳಿಂದ ದೂರವಿಡಲಾಗಿತ್ತು ಎಂದರು.
ಬೆಂಗಳೂರಿನ ಚಿಂತಕ ಚರಣ್ ಗುಂಜೂರು ಮಾತನಾಡಿ, ಅಂಬೇಡ್ಕರ್‌ರನ್ನು ಅರ್ಥೈಸಿಕೊಳ್ಳಲು ಸಂವಿಧಾನ ಓದು ಮುಖ್ಯ. ಸುಪ್ರೀಂ ತೀರ್ಪಿನ ಹೊರತಾಗಿಯೂ ವಾಕ್ ಸ್ವಾತಂತ್ರ್ಯ ಹರಣಕ್ಕೆ ಕಾಂಗ್ರೆಸ್ ಮೊದಲ ಬಾರಿ ಸಂವಿಧಾನ ತಿದ್ದು ಪಡಿ ಮಾಡಿದೆ. ತುಷ್ಠೀಕರಣ ನೀತಿ ದೇಶಕ್ಕೆ, ಹಿಂದೂಗಳಿಗೆ ಮಾರಕವಾಗಲಿದೆ ಎಂದು ನುಡಿದರು.
ದಲಿತ ಮುಖಂಡ ಗೋಕುಲದಾಸ್ ಬಾರ್ಕೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ನೀಡಿದ ಹಕ್ಕಿನ ನೆಲೆಯಲ್ಲಿ ಶೇ.30ರಿಂದ 40ರಷ್ಟು ಮತಗಳ ಪರಿವರ್ತನೆಯಾಗುತ್ತಿದೆ. ಸಂವಿಧಾನದ ಆಶೋತ್ತರಗಳನ್ನು ಈಡೇರಿಸುವ ಜವಾಬ್ದಾರಿ ರಾಜಕೀಯ ಪಕ್ಷಗಳು ಹಾಗೂ ನಮ್ಮೆಲ್ಲರ ಮೇಲಿದೆ ಎಂದರು.
ಭಾರತಿ ಚಂದ್ರಶೇಖರ್ ವಂದೇ ಮಾತರಂ ಹಾಡಿದರು. ಶ್ರೀಕಾಂತ್ ನಾಯಕ್ ಸ್ವಾಗತಿಸಿದರು. ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ದರು. ಸಂವಿಧಾನ ಸಮ್ಮಾನ್ ಅಭಿಯಾನ ಜಿಲ್ಲಾ ಸಹ ಸಂಚಾಲಕ ಉಮೇಶ್ ನಾಯ್ಕ್ ಸಂವಿಧಾನ ಪೀಠಿಕೆ ಓದಿದರು. ವಿಜಯ ಕುಮಾರ್ ಕೊಡವೂರು ವಂದಿಸಿದರು.
ಸಂವಿಧಾನ: ಯಾರಿಂದ ಎಷ್ಟು ತಿದ್ದುಪಡಿ?
ಭಾರತದ ಸಂವಿಧಾನಕ್ಕೆ ಈ ತನಕ ಆಗಿರುವ ಒಟ್ಟು 106 ತಿದ್ದುಪಡಿಗಳಲ್ಲಿ ಕಾಂಗ್ರೆಸ್ 75ಬಾರಿ, ಮೊರಾರ್ಜಿ/ವಿ. ಪಿ. ಸಿಂಗ್/ಚಂದ್ರಶೇಖರ್ ಅವಧಿಯಲ್ಲಿ 9 ಬಾರಿ, ವಾಜಪೇಯಿ ಅವಧಿಯಲ್ಲಿ 14 ಬಾರಿ, ನರೇಂದ್ರ ಮೋದಿ ಅವಧಿಯಲ್ಲಿ ಎಂಟು ತಿದ್ದುಪಡಿ ಮಾಡಲಾಗಿದೆಎಂದು ಬೆಂಗಳೂರಿನ ಚಿಂತಕ ಚರಣ್ ಗುಂಜೂರು ಹೇಳಿದರು.